ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಮುಂದಿನ ಸಿಎಂ ಆಯ್ಕೆ ಬಗ್ಗೆ 'ಮಹಾಯುತಿ' ಮೈತ್ರಿಕೂಟದಲ್ಲಿ ಒಮ್ಮತ ಮೂಡುತ್ತಿಲ್ಲ. ಹಂಗಾಮಿ ಸಿಎಂ ಏಕನಾಥ್ ಶಿಂದೆ ಅವರ ಶಿವಸೇನೆಯು ಬಿಹಾರ ಮಾದರಿಗೆ ಪಟ್ಟು ಹಿಡಿದಿದ್ದರೆ, ಬಿಜೆಪಿ ಇದನ್ನು ತಿರಸ್ಕರಿಸಿದೆ. ಇದರಿಂದ ನೂತನ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು ಬಗೆಹರಿಯುತ್ತಿಲ್ಲ.
ಶಿವಸೇನೆಯ ಶಾಸಕರು ಏಕನಾಥ್ ಶಿಂದೆ ಅವರನ್ನೇ ಮತ್ತೆ ಮುಖ್ಯಮಂತ್ರಿ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇತ್ತ ಕೂಟದ ದೊಡ್ಡ ಪಕ್ಷವಾಗಿರುವ ಬಿಜೆಪಿಯು ದೇವೇಂದ್ರ ಫಡ್ನವೀಸ್ ಅವರನ್ನೇ ಸಿಎಂ ಮಾಡಬೇಕು ಎಂದು ಒತ್ತಾಯಿಸುತ್ತಿದೆ. ಇದಲ್ಲದೆ, ಆರ್ಎಸ್ಎಸ್ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೂಡ ಫಡ್ನವೀಸ್ಗೆ ಬೆಂಬಲ ನೀಡಿದೆ.
ಶಿಂದೆ ಬಣದ ವಾದವೇನು? ಮಹಾಯುತಿ ಕೂಟದ ಎರಡನೇ ದೊಡ್ಡ ಪಕ್ಷವಾದ ಏಕನಾಥ್ ಶಿಂದೆ ಬಣವು ಸಿಎಂ ಸ್ಥಾನ ತನಗೇ ಧಕ್ಕಬೇಕು ಎಂದು ಪಟ್ಟು ಹಿಡಿದಿದೆ. ಚುನಾವಣೆಗೂ ಮೊದಲು ಶಿಂದೆ ಅವರು ಸಿಎಂ ಆಗಿದ್ದರು. ಅವರ ನೇತೃತ್ವದಲ್ಲಿ ಮೈತ್ರಿಕೂಟ ಚುನಾವಣೆ ಎದುರಿಸಿ, ಭರ್ಜರಿ ಜಯ ಸಾಧಿಸಿದೆ. ಇದು, ಶಿಂದೆ ನೇತೃತ್ವಕ್ಕೆ ಸಿಕ್ಕ ಮನ್ನಣೆ. ಅವರೇ ಗೆಲುವಿನ ರೂವಾರಿ ಎಂದು ವಾದಿಸುತ್ತಿದೆ.
ಬಿಹಾರ ಮಾದರಿಗೆ ಬೇಡಿಕೆ: ಜೊತೆಗೆ, ಬಿಹಾರ ಮಾದರಿಯನ್ನು ಪಾಲಿಸಲು ಶಿವಸೇನೆ ಒತ್ತಾಯಿಸುತ್ತಿದೆ. ಬಿಹಾರದ ಕೂಟದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಜೆಡಿಯುನ ನಿತೀಶ್ಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಲಾಗಿದೆ. ಹರಿಯಾಣದಲ್ಲೂ ನಯಾಬ್ ಸಿಂಗ್ ಸೈನಿ ನೇತೃತ್ವದಲ್ಲಿ ಚುನಾವಣೆ ಗೆಲ್ಲಲಾಗಿದೆ. ಬಳಿಕ ಅವರನ್ನೇ ಸಿಎಂ ಆಗಿ ಮುಂದುವರಿಸಲಾಗಿದೆ. ಅದರಂತೆಯೇ ನಮಗೆ ಸಿಎಂ ಪಟ್ಟ ಬಿಟ್ಟುಕೊಡಿ ಎಂದು ಶಿವಸೇನೆ ಶಾಸಕರು ಆಗ್ರಹಿಸುತ್ತಿದ್ದಾರೆ.
ಆದರೆ, ಇದನ್ನು ಬಿಜೆಪಿ ನಿರಾಕರಿಸಿದೆ. ಬಿಹಾರ ಮತ್ತು ಮಹಾರಾಷ್ಟ್ರ ಪರಿಸ್ಥಿತಿ ಬೇರೆ. ಬಿಹಾರ ಮಾದರಿಯನ್ನು ಇಲ್ಲಿ ಪಾಲಿಸಲು ಸಾಧ್ಯವಿಲ್ಲ. ಕಾರಣ ಅಲ್ಲಿ ಮೊದಲೇ ನಿತೀಶ್ಕುಮಾರ್ ಸಿಎಂ ಎಂದು ಘೋಷಿಸಲಾಗಿತ್ತು. ಆದರೆ, ಇಲ್ಲಿ ಸಿಎಂ ಮುಖವನ್ನು ಘೋಷಿಸಿರಲಿಲ್ಲ. ಈ ಬಗ್ಗೆ ಕೂಟದಲ್ಲಿ ಮೊದಲೇ ಒಪ್ಪಂದಕ್ಕೆ ಬರಲಾಗಿತ್ತು ಎಂದು ಬಿಜೆಪಿ ಹೇಳುತ್ತಿದೆ.
ಬಿಜೆಪಿ ಬೆನ್ನಿಗೆ ನಿಂತ ಎನ್‌ಸಿಪಿ: ಇನ್ನು, ಕೂಟದ ಮೂರನೇ ಪಕ್ಷವಾದ ಅಜಿತ್ ಪವಾರ್ ಅವರ ಎನ್‌ಸಿಪಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಸಿಎಂ ಮಾಡಿದಲ್ಲಿ ಬೆಂಬಲ ನೀಡುವುದಾಗಿ ಈಗಾಗಲೇ ತಿಳಿಸಿದೆ. ಅಜಿತ್ ಸಿಎಂ ರೇಸ್ನಲ್ಲಿದ್ದರೂ, ಫಡ್ನವೀಸ್ ಅವರಿಗೆ ಬೆಂಬಲ ನೀಡುವುದಾಗಿ ಪಕ್ಷ ಹೇಳಿದೆ.
15ನೇ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 288 ಸ್ಥಾನಗಳ ಪೈಕಿ 230ರಲ್ಲಿ ಗೆದ್ದಿದೆ. ಇದರಲ್ಲಿ ಬಿಜೆಪಿ 132, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ; ದೇವೇಂದ್ರ ಫಡ್ನವೀಸ್ಗೆ ಅಜಿತ್ ಪವಾರ್ ಬೆಂಬಲ: ಎನ್‌ಸಿಪಿ ಜೊತೆಗೂಡಿ ಬಿಜೆಪಿ ಸರ್ಕಾರ ರಚನೆ?