ಝಲಾವರ್(ರಾಜಸ್ಥಾನ): ನೀಟ್ ಯುಜಿ ಪೇಪರ್ ಸೋರಿಕೆ ಹಗರಣದ ಪ್ರಕರಣದಲ್ಲಿ ರಾಜಸ್ಥಾನದ ಝಲಾವರ್ ವೈದ್ಯಕೀಯ ಕಾಲೇಜಿನಲ್ಲಿ ಕನಿಷ್ಠ 10 ವೈದ್ಯಕೀಯ ವಿದ್ಯಾರ್ಥಿಗಳನ್ನು ದೆಹಲಿ ಮತ್ತು ಮುಂಬೈ ಪೊಲೀಸರು ತನಿಖೆಯ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೀಟ್ ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮತ್ತು ಮುಂಬೈ ಪೊಲೀಸರು ಝಲಾವರ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ 10 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಝಲಾವರ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸುಭಾಷ್ ಚಂದ್ರ ಜೈನ್ ಅವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಝಲಾವರ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಂಬಿಬಿಎಸ್ ವಿದ್ಯಾರ್ಥಿಗಳ ಹೆಸರುಗಳು ಬೆಳಕಿಗೆ ಬಂದಿದೆ. ವಿಚಾರಣೆಗಾಗಿ ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ತನಿಖಾಧಿಕಾರಿಗಳು ಸೂಚಿಸಿದ್ದಾರೆ. ಇವರಲ್ಲಿ ಎಂಟು ವಿದ್ಯಾರ್ಥಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿದ್ದು, ಇಬ್ಬರು ವೈದ್ಯಾಧಿಕಾರಿಗಳು ಇನ್ನೂ ಪೊಲೀಸ್ ವಶದಲ್ಲಿದ್ದಾರೆ.
ಕಳೆದ ಭಾನುವಾರ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಸಿಬಿಐ, ಗುರುವಾರ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಈ ಪ್ರಕರಣದ ಮೊದಲ ಬಂಧನವನ್ನು ಮಾಡಿದೆ. ಪ್ರಕರಣದ ಆರೋಪಿಗಳಾದ ಮನೀಶ್ ಕುಮಾರ್ ಮತ್ತು ಅಶುತೋಷ್ ಕುಮಾರ್ ಎಂಬ ಇಬ್ಬರು ವೈದ್ಯಕೀಯ ಪ್ರವೇಶ ಪರೀಕ್ಷೆಯ ಆಕಾಂಕ್ಷಿಗಳಿಗೆ ಪರೀಕ್ಷೆಗೆ ಮೊದಲು ಸುರಕ್ಷಿತ ವಸತಿ ಸೌಕರ್ಯವನ್ನು ಒದಗಿಸಿದ್ದಾರೆ. ಅಲ್ಲದೇ ಅಲ್ಲಿ ಅವರಿಗೆ ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಕೀಗಳನ್ನು ನೀಡಿದ್ದರು.
ಈವರೆಗೆ ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಸಿಬಿಐ 6 ಎಫ್‌ಐಆರ್‌ಗಳನ್ನು ದಾಖಲಿಸಿದೆ. ನೀಟ್ - ಯುಜಿಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮೂಲಕ ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುತ್ತದೆ. ಈ ವರ್ಷದ ಪರೀಕ್ಷೆಯನ್ನು ಮೇ 5 ರಂದು ನಡೆಸಲಾಯಿತು. 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಇದನ್ನೂ ಓದಿ: ಉಭಯ ಸದನಗಳಲ್ಲಿ ನೀಟ್ ಗದ್ದಲ: ಸದನದಿಂದ ಯುವಕರಿಗೆ ಸರಿಯಾದ ಸಂದೇಶ ರವಾನೆಯಾಬೇಕೆಂದು ಪಟ್ಟು ಹಿಡಿದ ರಾಹುಲ್ - NEET row