ಜೋಧಪುರ (ರಾಜಸ್ಥಾನ): ನೀಟ್ ಪರೀಕ್ಷೆ ವೇಳೆ ಜೋಧ್‌ಪುರದ ಬನಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿಯ ಬದಲಿಗೆ ಪರೀಕ್ಷೆ ಬರೆಯಲು ಬಂದಿದ್ದ ಡಮ್ಮಿ ಅಭ್ಯರ್ಥಿಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಡಮ್ಮಿ ಅಭ್ಯರ್ಥಿ ಬಾರ್ಮರ್ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಇಪ್ಪತ್ತು ಲಕ್ಷ ರೂಪಾಯಿಗೆ ಒಪ್ಪಂದದ ಮೇರೆಗೆ ಈ ಡಮ್ಮಿ ಅಭ್ಯರ್ಥಿ ಪರೀಕ್ಷೆ ಬರೆಯಲು ಬಂದಿದ್ದನು. ಅಷ್ಟೇ ಅಲ್ಲ ಈ ಡಮ್ಮಿ ಅಭ್ಯರ್ಥಿ ಒಂದು ಲಕ್ಷ ರೂಪಾಯಿ ಮುಂಗಡವಾಗಿ ಹಣ ತೆಗೆದುಕೊಂಡಿದ್ದಾನೆ. ಸದ್ಯ ಮೂಲ ಅಭ್ಯರ್ಥಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕೇಂದ್ರೀಯ ವಿದ್ಯಾಲಯದ ಕೇಂದ್ರದ ಅಧೀಕ್ಷಕರು ಭಾನುವಾರ ರಾತ್ರಿ ವರದಿ ನೀಡಿದ್ದು, ಅದರಲ್ಲಿ ಸಿವಾರದ ಸಂಚೋರ್ ನಿವಾಸಿ ಸಂಜಯ್ ವಿಷ್ಣೋಯ್ ಬದಲಿಗೆ ಬಾರ್ಮರ್ ಸೋಡಿಯಾರ್ ನಿವಾಸಿ ಚೇತನ್ ಜಾಟ್ ಪರೀಕ್ಷೆ ಬರೆಯಲು ಬಂದಿದ್ದರು ಎಂದು ತಿಳಿಸಿರುವುದಾಗಿ ಎಸಿಪಿ ಪಿಯೂಷ್ ಕಾವಿಯಾ ತಿಳಿಸಿದ್ದಾರೆ. ಕೇಂದ್ರದಲ್ಲಿ ಎಲ್ಲ ಅಭ್ಯರ್ಥಿಗಳ ಬಯೋಮೆಟ್ರಿಕ್ ಪರಿಶೀಲನೆ ನಡೆದಿದ್ದು, ಇದರಲ್ಲಿ ಸಂಜಯ್ ಅವರ ಪರಿಶೀಲನೆ ನಡೆದಿಲ್ಲ. ಎನ್‌ಟಿಎಯಿಂದ ಈ ಮಾಹಿತಿ ಪಡೆದ ನಂತರ ಚೇತನ್ ಅವರನ್ನು ಪರೀಕ್ಷೆಗೆ ಕೂಡಿಸಲಾಗಿತ್ತು.
ಚೇತನ್‌ನನ್ನು ಬಂಧಿಸಿದ ನಂತರ, ಅವನ ವಿಚಾರಣೆಯ ಆಧಾರದ ಮೇಲೆ ಪೊಲೀಸರು ಸಂಜಯ್‌ನನ್ನು ಹುಡುಕಲು ಆರಂಭಿಸಿದರು. ಆದರೆ, ಸಂಜಯ್ ಪರಾರಿಯಾಗಿದ್ದು, ಫೋನ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಸದ್ಯಕ್ಕೆ ಅವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪೊಲೀಸರ ವಿಚಾರಣೆ ವೇಳೆ ಇಪ್ಪತ್ತು ಲಕ್ಷ ರೂಪಾಯಿಗೆ ಡೀಲ್ ನಡೆದಿದೆ. ಒಂದು ಲಕ್ಷ ರೂಪಾಯಿ ಮುಂಗಡವಾಗಿ ಹಣ ತೆಗೆದುಕೊಂಡಿದ್ದೇನೆ. ನೀಟ್‌ನಲ್ಲಿ ಆಯ್ಕೆಯಾದ ನಂತರ ಉಳಿದ ಮೊತ್ತವನ್ನು ತೆಗೆದುಕೊಳ್ಳಬೇಕಾಗಿತ್ತು ಎಂದು ಡಮ್ಮಿ ಅಭ್ಯರ್ಥಿ ಬಾಯ್ಬಿಟ್ಟಿದ್ದಾನೆ.
ಎನ್‌ಟಿಎ ಮೊದಲ ಬಾರಿಗೆ ನೀಟ್‌ನಲ್ಲಿ ಬಯೋಮೆಟ್ರಿಕ್ ಪರಿಶೀಲನೆ ಆರಂಭಿಸಿದೆ. ಈ ಮಾಹಿತಿ ಹಿಂದೆ ಬಂದಿರಲಿಲ್ಲ. ಇದೇ ಕಾರಣಕ್ಕೆ ನಕಲಿ ಆಧಾರ್ ಕಾರ್ಡ್‌ಗಳನ್ನು ಸಿದ್ಧಪಡಿಸಿ ಕೇಂದ್ರದೊಳಗೆ ಪ್ರವೇಶಿಸಿದ್ದ ಡಮ್ಮಿ ಅಭ್ಯರ್ಥಿಗಳು ಬಯೋಮೆಟ್ರಿಕ್ ಪರಿಶೀಲನೆಯಲ್ಲಿ ಹೊಂದಾಣಿಕೆಯಾಗದ ಕಾರಣ ಸಿಕ್ಕಿಬಿದ್ದಿದ್ದಾರೆ.