ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಇಂದು ಸಂಜೆ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ರಾಷ್ಟ್ರಪತಿಗಳು ಸರ್ಕಾರ ರಚಿಸಲು ಆಹ್ವಾನ ನೀಡಿದರು. ಜೂನ್ 9ರಂದು ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೋದಿ ತಿಳಿಸಿದರು.
ನಂತರ ಮಾತನಾಡಿದ ಮೋದಿ, ''ರಾಷ್ಟ್ರಪತಿಗಳು ನನಗೆ ನಿಯೋಜಿತ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲು ತಿಳಿಸಿದ್ದಾರೆ. ಜೂನ್ 9ರಂದು ಸಂಜೆ ಪ್ರಮಾಣವಚನ ಸಮಾರಂಭ ನಡೆಯುವ ಬಗ್ಗೆ ಮಾಹಿತಿ ನೀಡಿದ್ದೇನೆ. ನಾವು ಸಚಿವರ ಪಟ್ಟಿಯನ್ನು ರಾಷ್ಟ್ರಪತಿಗೆ ರವಾನಿಸಲಿದ್ದೇವೆ'' ಎಂದು ತಿಳಿಸಿದರು.
ಮುಂದುವರೆದು, ''ಇದು 'ಆಜಾದಿ ಕಾ ಅಮೃತ್ ಮಹೋತ್ಸವ'ದ ನಂತರ ಮೊದಲ ಚುನಾವಣೆ. ಮೂರನೇ ಬಾರಿಗೆ ಎನ್‌ಡಿಎ ಸರ್ಕಾರಕ್ಕೆ ದೇಶಕ್ಕಾಗಿ ಸೇವೆ ಸಲ್ಲಿಸಲು ಜನ ಅವಕಾಶ ನೀಡಿದ್ದಾರೆ. ಕಳೆದ ಎರಡು ಅವಧಿಯಲ್ಲಿ ನಾನು ದೇಶದ ಜನರಿಗೆ ಭರವಸೆ ನೀಡಿದ್ದೇನೆ. ದೇಶ ಮುನ್ನಡೆದ ವೇಗ, ಬದಲಾವಣೆಯು ಪ್ರತಿಯೊಂದು ವಲಯದಲ್ಲೂ ಗೋಚರಿಸುತ್ತಿದೆ. 25 ಕೋಟಿ ಜನರು ಬಡತನದಿಂದ ಹೊರಬಂದಿರುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಷಯವಾಗಿದೆ'' ಎಂದು ಮೋದಿ ಹೇಳಿದರು.
ಎನ್‌ಡಿಎ ನಿಯೋಗದಿಂದಲೂ ರಾಷ್ಟ್ರಪತಿ ಭೇಟಿ: ಎನ್‌ಡಿಎ ನಿಯೋಗ ಸಹ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿತು. ನರೇಂದ್ರ ಮೋದಿ ಅವರನ್ನು ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾದ ಪತ್ರವನ್ನು ಹಸ್ತಾಂತರಿಸಲಾಯಿತು. ಜೊತೆಗೆ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಬೆಂಬಲ ಪತ್ರವನ್ನೂ ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಯಿತು.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದ ನಿಯೋಗದಲ್ಲಿ ರಾಜನಾಥ್ ಸಿಂಗ್, ಅಮಿತ್ ಶಾ, ಅಶ್ವಿನಿ ವೈಷ್ಣವ್, ಸಿ.ಎನ್.ಮಂಜುನಾಥ್, ಎನ್ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ರಾಜೀವ್ ರಂಜನ್ ಸಿಂಗ್, ಸಂಜಯ್ ಝಾ, ಏಕನಾಥ್ ಶಿಂಧೆ, ಹೆಚ್.ಡಿ.ಕುಮಾರಸ್ವಾಮಿ, ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ, ಪವನ್ ಕಲ್ಯಾಣ್, ಅಜಿತ್ ಪವಾರ್, ಅನುಪ್ರಿಯಾ ಪಟೇಲ್, ಜಯಂತ್ ಚೌಧರಿ, ಅತುಲ್ ಬೋರಾ, ಇಂದ್ರ ಹ್ಯಾಂಗ್ ಸುಬ್ಬಾ, ಸುದೇಶ್ ಮಹ್ತೊ, ಚಂದ್ರ ಪ್ರಕಾಶ್ ಚೌಧರಿ ಮತ್ತು ರಾಮದಾಸ್ ಅಠವಾಲೆ ಇದ್ದರು.
ಬೆಳಗ್ಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಾಯಕರು ಹಾಗೂ ಸಂಸದರ ಸಭೆ ಜರುಗಿತ್ತು. ಈ ಸಂದರ್ಭದಲ್ಲಿ ಎನ್‌ಡಿಎ ಸಂಸದೀಯ ಪಕ್ಷದ ನಾಯಕ, ಬಿಜೆಪಿ ಸಂಸದೀಯ ಪಕ್ಷದ ನಾಯಕ ಮತ್ತು ಲೋಕಸಭೆಯಲ್ಲಿ ಬಿಜೆಪಿ ನಾಯಕರಾಗಿ ಮೋದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು.
ಇದನ್ನೂ ಓದಿ: ಅಡ್ವಾಣಿ, ಜೋಷಿ, ಕೋವಿಂದ್ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ