ಮುಂಬೈ (ಮಹಾರಾಷ್ಟ್ರ): ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಅಜಿತ್ ಪವಾರ್ ಬಣದ ನಾಯಕ ಸಚಿನ್ ಕುರ್ಮಿ ಅವರನ್ನು ಶುಕ್ರವಾರ ರಾತ್ರಿ ಮುಂಬೈನ ಬೈಕುಲ್ಲಾ ಎಂಬಲ್ಲಿ ಹತ್ಯೆ ಮಾಡಲಾಗಿದೆ.
ಮುಂಬೈನ ಬೈಕುಲ್ಲಾ ಪ್ರದೇಶದ ಎಂಹೆಚ್ಎಡಿಎ (MHADA) ಕಾಲೋನಿಯಲ್ಲಿ ಕುರ್ಮಿ ಮೇಲೆ ದಾಳಿ ನಡೆದಿದೆ. ಮುಂಬೈ ಪೊಲೀಸರ ಮಾಹಿತಿ ಪ್ರಕಾರ, "ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ ಸಚಿನ್ ಕುರ್ಮಿ ಅವರನ್ನು ನಿನ್ನೆ ರಾತ್ರಿ ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಹರಿತವಾದ ಆಯುಧದಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ."
"ಈ ಘಟನೆಯು ಮಧ್ಯರಾತ್ರಿ 12:30 ರ ಸುಮಾರಿಗೆ ಸಂಭವಿಸಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಗಾಯಗೊಂಡ ಸಚಿನ್ ಅವರನ್ನು ಹತ್ತಿರದ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಪರೀಕ್ಷಿಸಿದ ಬಳಿಕ ಕುರ್ಮಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಮೃತದೇಹವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ'' ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸಚಿನ್ ಕುರ್ಮಿ ಮೇಲೆ ದಾಳಿ ಮಾಡಿದವರು ಯಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಾಳಿಯಲ್ಲಿ 2ರಿಂದ 3 ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿನ ಭದ್ರತೆಯ ಬಗ್ಗೆ ಕಳವಳ ಉಂಟುಮಾಡಿದೆ. ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಗಡಿಯಲ್ಲಿ ಒಳನುಸುಳುವಿಕೆ ಹಿಮ್ಮೆಟ್ಟಿಸಿದ ಸೇನಾ ಪಡೆ: ಇಬ್ಬರು ಉಗ್ರರು ಹತ - Kupwara Encounter