ನವದೆಹಲಿ: ಬಿಜೆಪಿಯ ಕುಟುಂಬ ರಾಜಕಾರಣದ ಟೀಕೆಯ ನಡುವೆಯೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಫಾರೂಕ್ ಅಬ್ಧುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಜೊತೆ ಚುನಾವಣಾಪೂರ್ವ ಮೈತ್ರಿಯೊಂದಿಗೆ ಕಣಕ್ಕಿಳಿದಿದ್ದ ಎನ್‌ಸಿ 41 ಸ್ಥಾನಗಳಲ್ಲಿ ಮುನ್ನಡೆ ಕಂಡರೆ, ಕಾಂಗ್ರೆಸ್ 6 ಸ್ಥಾನ ಭದ್ರಪಡಿಸಿಕೊಂಡಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತಿಳಿಸಿವೆ. ಸದ್ಯದ ಮಾಹಿತಿಯಂತೆ, ಎನ್‌ಸಿ ಶೇ 23.10 ಮತ್ತು ಕಾಂಗ್ರೆಸ್ ಶೇ 11.96 ಮತಗಳನ್ನು ಪಡೆದಿವೆ.
ದಶಕಗಳ ಬಳಿಕ ಹಾಗೂ ಕಣಿವೆ ನಾಡಿನಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು.
ಬಿಜೆಪಿ ಕಾಶ್ಮೀರದಲ್ಲಿ 13 ಮತ್ತು ಜಮ್ಮುವಿನಲ್ಲಿ 43 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಒಟ್ಟಾರೆ 29 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಪಕ್ಷದ ಮತ ಹಂಚಿಕೆ ಶೇ 22.36ರಷ್ಟಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 25 ಕ್ಷೇತ್ರದಲ್ಲಿ ಗೆಲುವು ಕಂಡಿತ್ತು.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ವಿಧಿ 370 ಅನ್ನು ಮರುಸ್ಥಾಪಿಸುವುದಾಗಿ ಎನ್‌ಸಿ ಚುನಾವಣೆಯಲ್ಲಿ ಮತ ಪ್ರಚಾರ ನಡೆಸಿತ್ತು. (ಐಎಎನ್ಎಸ್)
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಮುನ್ನಡೆ