ಬಿಜಾಪುರ (ಛತ್ತೀಸ್‌ಗಢ) : ಛತ್ತೀಸ್‌ಗಢದ ಬಿಜಾಪುರ ಮತ್ತು ಸುಕ್ಮಾ ಗಡಿಯಲ್ಲಿ ನಕ್ಸಲೀಯರ ದಾಳಿ ನಡೆದಿದೆ. ಇಲ್ಲಿ ಗಸ್ತು ತಿರುಗಲು ತೆರಳುತ್ತಿದ್ದ ಯೋಧರ ಮೇಲೆ ಮಾವೋವಾದಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಮೂವರು ಯೋಧರು ಗುಂಡೇಟಿಗೆ ಬಲಿಯಾಗಿದ್ದು, 14 ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ಯೋಧರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಯ್‌ಪುರಕ್ಕೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಹುಡುಕಾಟ ನಡೆಸಿದ ಯೋಧರು : ಬಿಜಾಪುರ ಸುಕ್ಮಾ ಗಡಿಯ ಟೇಕಲ್‌ಗುಡಂ ಗ್ರಾಮದ ಜಾಗರಗುಂದ ಬಳಿ ಈ ನಕ್ಸಲಿಯರು ಗುಂಡಿನ ದಾಳಿ ನಡೆಸಿದ್ದಾರೆ. ಯೋಧರು ಇಲ್ಲಿ ಶಿಬಿರವನ್ನು ಸ್ಥಾಪಿಸಿದ್ದಾರೆ. ಜೋನಗುಡಾ ಮತ್ತು ಅಲಿಗುಡಾದಲ್ಲಿ ಭದ್ರತಾ ಪಡೆ ನಕ್ಸಲಿಯರನ್ನ ಹುಡುಕಲು ಹೊರಟಿದ್ದರು. ಈ ಶೋಧ ತಂಡದಲ್ಲಿ ಕೋಬ್ರಾ, ಎಸ್‌ಟಿಎಫ್ ಮತ್ತು ಡಿಆರ್‌ಜಿ ಸಿಬ್ಬಂದಿ ಇದ್ದರು. ಈ ವೇಳೆ ಸೇನಾ ಸಿಬ್ಬಂದಿ ಮೇಲೆ ನಕ್ಸಲೀಯರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರೂ ಪ್ರತಿದಾಳಿ ನಡೆಸಿದ್ದಾರೆ.
ನಕ್ಸಲರ ಗುಂಡಿನ ದಾಳಿಯಲ್ಲಿ ಮೂವರು ಯೋಧರು ವೀರಮರಣವನ್ನು ಅಪ್ಪಿದ್ದರೆ, 14ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಗಾಯಗೊಂಡ ಯೋಧರನ್ನು ಉತ್ತಮ ಚಿಕಿತ್ಸೆಗಾಗಿ ತಕ್ಷಣ ವಿಮಾನದಲ್ಲಿ ಕರೆತರಲಾಯಿತು ಎಂದು ಬಸ್ತಾರ್ ಐಜಿ ಪಿ ಸುಂದರರಾಜ್ ಖಚಿತಪಡಿಸಿದ್ದಾರೆ. ಪ್ರಸ್ತುತ ಎನ್‌ಕೌಂಟರ್‌ನಲ್ಲಿ ಎಷ್ಟು ನಕ್ಸಲೀಯರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಎಲ್ಲೆಲ್ಲಿ ಎನ್‌ಕೌಂಟರ್: ಜೋನಗೂಡಾ ಮತ್ತು ಅಲಿಗುಡ ನಡುವಿನ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ ಎಂಬುದಾಗಿ ತಿಳಿದುಬಂದಿದೆ. ನಕ್ಸಲೀಯರು ಇರುವ ಬಗ್ಗೆ ಯೋಧರಿಗೆ ಮೊದಲೇ ಮಾಹಿತಿ ಸಿಕ್ಕಿತ್ತು ಎಂಬುದು ಗೊತ್ತಾಗಿದೆ. ನಕ್ಸಲೀಯರು ಇರುವ ಸುದ್ದಿ ತಿಳಿದ ತಕ್ಷಣ ಸೈನಿಕರು ಆ ಪ್ರದೇಶವನ್ನು ಸುತ್ತುವರೆದಿದ್ದರು. ಯೋಧರು ಮುತ್ತಿಗೆ ಹಾಕಿದ ತಕ್ಷಣ ನಕ್ಸಲೀಯರು ಹೆದರಿ ಮನಬಂದಂತೆ ಗುಂಡು ಹಾರಿಸತೊಡಗಿದ್ದಾರೆ. ಎರಡೂ ಕಡೆಯಿಂದ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಗುಂಡೇಟಿಗೆ ಬಲಿಯಾಗಿದ್ದಾರೆ. 14ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ತಾರ್ ಐಜಿ ಎನ್‌ಕೌಂಟರ್ ಅನ್ನು ಖಚಿತಪಡಿಸಿದ್ದಾರೆ. 2021ರಲ್ಲಿ ಇದೇ ಸ್ಥಳದಲ್ಲಿಯೇ 23 ಯೋಧರು ಹುತಾತ್ಮರಾಗಿದ್ದರು.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಇಬ್ಬರು ನಕ್ಸಲೀಯರ ಎನ್‌ಕೌಂಟರ್