ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ವೈದ್ಯಕೀಯ ಪ್ರವೇಶಕ್ಕಾಗಿ ನಡೆದ 2024ರ NEET UG ಫಲಿತಾಂಶವನ್ನು ಇಂದು (ಶನಿವಾರ) ಕೇಂದ್ರ ಮತ್ತು ನಗರವಾರು ರಿಸಲ್ಟ್ ಪ್ರಕಟಿಸಲಾಗಿದೆ. ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳು NTA NEET ಅಧಿಕೃತ ವೆಬ್‌ಸೈಟ್- exams.nta.ac.in/NEET/ ನಲ್ಲಿ ಹಾಗೂ neet.ntaonline.in ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.
ಜುಲೈ 18 ರಂದು ಸುಪ್ರೀಂ ಕೋರ್ಟ್, ಎನ್‌ಟಿಎಗೆ ಜುಲೈ 20 ರಂದು ಮಧ್ಯಾಹ್ನ 12 ಗಂಟೆಯೊಳಗೆ ನೀಟ್ ಯುಜಿ ಫಲಿತಾಂಶಗಳನ್ನು ಪ್ರಕಟಿಸಲು ಆದೇಶಿಸಿತ್ತು. ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅಂಕಗಳನ್ನು ಪ್ರಕಟಿಸಲು ಎನ್‌ಟಿಎಗೆ ಹೇಳಿತ್ತು. ಆದರೆ, ವಿದ್ಯಾರ್ಥಿಗಳ ಗುರುತನ್ನು ಬಹಿರಂಗಪಡಿಬಾರದು. ಇಂದು ಮಧ್ಯಾಹ್ನದೊಳಗೆ ನಗರ ಮತ್ತು ಕೇಂದ್ರವಾರು NEET ಯುಜಿ ಫಲಿತಾಂಶಗಳನ್ನು ಬಿಡುಗಡೆ ಮಾಡುವಂತೆ ಸಿಜೆಐ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಆದೇಶ ಹೊರಡಿಸಿತ್ತು.
ಈ ವರ್ಷ, NTA NEET ಯುಜಿ ಪರೀಕ್ಷೆಯನ್ನು ಮೇ 5 ರಂದು 4,750 ಕೇಂದ್ರಗಳಲ್ಲಿ ನಡೆಸಲಾಗಿತ್ತು. NEET UG ಫಲಿತಾಂಶಗಳನ್ನು 2024ರ ಜೂನ್ 4 ರಂದು ಘೋಷಿಸಲಾಗಿತ್ತು. ಮರು ಪರೀಕ್ಷೆಯನ್ನು ಜೂನ್ 23ರಂದು ನಡೆಸಲಾಗಿತ್ತು. ಈ ವರ್ಷ ಸುಮಾರು 24 ಲಕ್ಷ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಿದ್ದರು. 1,563 ಅಭ್ಯರ್ಥಿಗಳು ಮರು ಪರೀಕ್ಷೆಗೆ ಹಾಜರಾಗಿದ್ದರು.