ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ವೇಳೆ ಆಂಧ್ರಪ್ರದೇಶದಲ್ಲಿ ಎರಡು ಪಕ್ಷಗಳು ಕೈ ಜೋಡಿಸುವ ಮುನ್ಸೂಚನೆಗಳ ನಡುವೆ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಬುಧವಾರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಗಳಿಗೆ ಕಾರಣವಾಗಿದೆ.
ಆಂಧ್ರಪ್ರದೇಶದಲ್ಲೂ ಲೋಕಸಭಾ ಚುನಾವಣೆಯ ಜತೆಗೇ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ. ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಚಂದ್ರಬಾಬು ನಾಯ್ಡು ಮೈತ್ರಿ ಕುರಿತಂತೆ ಮಾತನಾಡಿದರು ಎಂದು ತಿಳಿದು ಬಂದಿದೆ. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕೂಡಾ ಇದ್ದರು ಎಂದು ಮೂಲಗಳಿಂದ ಹೇಳಿವೆ.
ಚಂದ್ರಬಾಬು ನಾಯ್ಡು ಅವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಮರಳಿದರೆ, ಜನತಾ ದಳ (ಯುನೈಟೆಡ್) ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಂತರ ಮತ್ತೆ ಎನ್ಡಿಎ ಒಕ್ಕೂಟಕ್ಕೆ ಸೇರಿದ ಎರಡನೇ ನಾಯಕರಾಗುತ್ತಾರೆ. ಟಿಡಿಪಿ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಚಂದ್ರಬಾಬು ನಾಯ್ಡು ಬಿಜೆಪಿಯೊಂದಿಗೆ ಕೈಜೋಡಿಸಲು ಉತ್ಸುಕರಾಗಿದ್ದಾರೆ. ಬಿಜೆಪಿಯ ಹಿರಿಯ ನಾಯಕರೊಬ್ಬರು ತಮ್ಮ ಪಕ್ಷವು ಮೈತ್ರಿಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಆದರೆ ಇದು ಮುಖ್ಯವಾಗಿ ಲೋಕಸಭೆ ಚುನಾವಣೆಗೆ ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಟಿಡಿಪಿ ಎಷ್ಟು ಸ್ಥಾನಗಳನ್ನು ನೀಡಲು ಒಪ್ಪುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ. ಆಂಧ್ರಪ್ರದೇಶದಿಂದ ತೆಲಂಗಾಣ ರಾಜ್ಯಗಳು ಔಪಚಾರಿಕವಾಗಿ ಬೇರೆ ಬೇರೆ ಆಗುವ ಮುನ್ನ ಅಂದರೆ 2014 ರ ಚುನಾವಣೆಯಲ್ಲಿ ಎರಡೂ ಒಟ್ಟಿಗೆ ಸ್ಪರ್ಧಿಸಿದ್ದರು. ಆಗ ಬಿಜೆಪಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು ಮತ್ತು ಅಖಂಡ ರಾಜ್ಯದ 42 ಸ್ಥಾನಗಳ ಪೈಕಿ ಎಲ್ಲ ಸ್ಥಾನಗಳಲ್ಲೂ ಮೈತ್ರಿಕೂಟ ಜಯಭೇರಿ ಬಾರಿಸಿತ್ತು.
ತೆಲಂಗಾಣ ರಚನೆಯ ನಂತರ, ಆಂಧ್ರಪ್ರದೇಶ ರಾಜ್ಯವು 25 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಬಿಜೆಪಿ ಆರರಿಂದ ಎಂಟು ಸ್ಥಾನಗಳಲ್ಲಿ ಎಲ್ಲಿಯಾದರೂ ಸ್ಪರ್ಧಿಸಲು ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ. ಟಿಡಿಪಿ 2018 ರಲ್ಲಿ ಎನ್‌ಡಿಎಯಿಂದ ಹೊರ ನಡೆದಿತ್ತು. ಆದರೆ, 2019 ರ ಚುನಾವಣೆಯಲ್ಲಿ ಅದು ಕೇವಲ ಮೂರು ಲೋಕಸಭಾ ಸ್ಥಾನಗಳನ್ನು ಮಾತ್ರವೇ ಗೆಲ್ಲಲು ಸಾಧ್ಯವಾಗಿತ್ತು. ಅಷ್ಟೇ ಅಲ್ಲ ವೈಎಸ್‌ಆರ್ ಕಾಂಗ್ರೆಸ್ ವಿರುದ್ಧ ಹೀನಾಯ ಸೋಲುಂಡು ಪ್ರತಿಪಕ್ಷದ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬಿಜೆಪಿ ಟಿಡಿಪಿಯೊಂದಿಗೆ ಮೈತ್ರಿಗೆ ಮುಕ್ತವಾಗಿದೆ. ಈ ನಡುವೆ ವೈಎಸ್ಆರ್ಪಿ ಜತೆಯೂ ಬಿಜೆಪಿ ಉತ್ತಮ ಬಾಂಡಿಂಗ್ ಹೊಂದಿದೆ. ಇದು ಸಹ ತಕ್ಷಣಕ್ಕೆ ಚಂದ್ರಬಾಬು ನಾಯ್ಡು ಜತೆ ಹೊಂದಾಣಿಕೆಗೆ ತುಸು ಹಿನ್ನಡೆಯನ್ನುಂಟು ಮಾಡುತ್ತದೆ. ಬಿಜೆಪಿ ಮಿತ್ರಪಕ್ಷವಾಗಿದ್ದ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವು ಈಗಾಗಲೇ ಟಿಡಿಪಿ ಜೊತೆ ಕೈಜೋಡಿಸಲು ನಿರ್ಧರಿಸಿದೆ
ಇದನ್ನು ಓದಿ:ಉತ್ತರ-ದಕ್ಷಿಣವೆಂಬ ದೇಶ ವಿಭಜನೆಯ ಹೇಳಿಕೆ ನಿಲ್ಲಿಸಿ: ಕಾಂಗ್ರೆಸ್ ವಿರುದ್ಧ ಮೋದಿ ಕಿಡಿ