ಮುಂಬೈ, ಮಹಾರಾಷ್ಟ್ರ: ಮುಂಬೈ ಪೊಲೀಸರ ಗಸ್ತು ತಂಡವು ಮಂಗಳವಾರ (ಫೆಬ್ರವರಿ 6) ಬೆಳಗ್ಗೆ ಗೇಟ್‌ವೇ ಆಫ್ ಇಂಡಿಯಾ ಬಳಿ ಕುವೈತ್‌ನಿಂದ ಬರುತ್ತಿದ್ದ ದೋಣಿಯನ್ನು ತಡೆದಿದೆ. ಮುಂಬೈ ಪೊಲೀಸರ ಪ್ರಕಾರ, ಗೇಟ್‌ವೇ ಆಫ್ ಇಂಡಿಯಾ ಬಳಿ ಅಬ್ದುಲ್ಲಾ ಷರೀಫ್ ಎಂಬ ಅನುಮಾನಾಸ್ಪದ ದೋಣಿ ಪತ್ತೆಯಾಗಿದೆ. ದೋಣಿಯಲ್ಲಿ ಮೂವರು ಇದ್ದರು, ಎಲ್ಲರೂ ತಮಿಳುನಾಡಿನ ಕನ್ಯಾಕುಮಾರಿ ನಿವಾಸಿಗಳು. ದೋಣಿ ಕುವೈತ್‌ನಿಂದ ಬಂದಿದ್ದು, ವಶಪಡಿಸಿಕೊಳ್ಳಲಾಗಿದೆ. ಮೂವರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲಬಾ ಪೊಲೀಸರು ಸ್ಥಳದಲ್ಲಿದ್ದಾರೆ. ಅವರಿಂದ ಅನುಮಾನಾಸ್ಪದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ವಶದಲ್ಲಿರುವ ಕನ್ಯಾಕುಮಾರಿ ನಿವಾಸಿಗಳಾದ ಮೂವರನ್ನು ಆಂಟನಿ, ನೀಡಿಸೋ ಡಿಟ್ಟೋ ಮತ್ತು ವಿಜಯ್ ಆಂಟೋನಿ ಎಂದು ಗುರುತಿಸಲಾಗಿದೆ. ಬಂಧಿತರ ಪ್ರಕಾರ, ಮೂವರೂ ಮೀನುಗಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅವರು ಬಾಕಿ ಮತ್ತು ಸಂಬಳವನ್ನು ಪಾವತಿಸದಿರುವುದು ಮತ್ತು ಕಷ್ಟಕರ ಸಂದರ್ಭಗಳನ್ನು ಉಲ್ಲೇಖಿಸಿದರು ಮತ್ತು ಮಾಲೀಕರ ದೋಣಿಯನ್ನು ಕದ್ದಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದ್ದರಿಂದ ಮಾಲೀಕರ ದೋಣಿ ಕದಿಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ನಡೆದಿದ್ದೇನು?: ದೋಣಿಯಲ್ಲಿದ್ದವರು ಕೆಲಸ ಹುಡುಕುತ್ತಿದ್ದರು. ಆಗ ಅವರನ್ನು ತಮಿಳುನಾಡಿನ ಏಜೆಂಟ್ ಒಬ್ಬರು ಎರಡು ವರ್ಷಗಳ ಹಿಂದೆ ಕುವೈತ್ಗೆ ಕಳುಹಿಸಿದ್ದರು. ಕಳೆದ ಎರಡು ವರ್ಷಗಳಿಂದ ‘ಅಬ್ದುಲ್ಲಾ ಷರೀಫ್ 1’ ಬೋಟ್ನಲ್ಲಿ ಕುವೈತ್ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಆದರೆ, ಈ ಎರಡು ವರ್ಷಗಳಲ್ಲಿ ದೋಣಿಯ ಮಾಲೀಕರು ಅವರಿಗೆ ಯಾವುದೇ ರೀತಿಯ ಸಂಬಳವನ್ನು ನೀಡಿರಲಿಲ್ಲ. ಅಷ್ಟೇ ಅಲ್ಲ ಮಾಲೀಕರು ಅವರನ್ನು ಥಳಿಸುತ್ತಿದ್ದರು. ಅವರ ಪಾಸ್‌ಪೋರ್ಟ್‌ಗಳನ್ನು ಮಾಲೀಕರು ಮುಟ್ಟುಗೋಲು ಹಾಕಿಕೊಂಡಿದ್ದರು. ಕೆಲಸ ಬಿಟ್ಟರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಸಹ ಹಾಕಿದ್ದರು. ಇದರಿಂದ ಬೇಸತ್ತ ಮೂವರು ಮಾಲೀಕ ಬೋಟ್ ಸಮೇತ ಭಾರತಕ್ಕೆ ಓಡಿ ಹೋಗಲು ನಿರ್ಧರಿಸಿದ್ದಾರೆ.
ಜನವರಿ 28ರಂದು ಈ ಮೂವರು ಮಾಲೀಕರ ಬೋಟ್ 'ಅಬ್ದುಲ್ಲಾ ಷರೀಫ್ 1'ಗೆ ಹೇಳದೇ ಕುವೈತ್‌ನಿಂದ ತೆರಳಿದ್ದರು. ಅವರು ಫೆಬ್ರವರಿ 6 ರಂದು ಮುಂಬೈ ತಲುಪಿದ್ದಾರೆ. ಆಗ ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ದೋಣಿಯಲ್ಲಿದ್ದವರು ವಿಚಾರಣೆ ವೇಳೆ ತಮ್ಮ ನೋವಿನ ಸಂಗತಿ ಹೇಳಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸರಳಾ ವಾಸವೆ ಈ ಮಾಹಿತಿ ನೀಡಿದ್ದಾರೆ.
ಅವರು 12 ದಿನಗಳ ಕಾಲ ತಡೆರಹಿತವಾಗಿ ಪ್ರಯಾಣಿಸಿದ್ದಾರೆ. ನಾವು ಅವರನ್ನು ನೋಡಿದಾಗ, ಅವರು ಮೂರು - ನಾಲ್ಕು ದಿನಗಳಿಂದ ಆಹಾರವನ್ನು ಸೇವಿಸಿರಲಿಲ್ಲ, ಅವರ ರೇಷನ್ ಖಾಲಿಯಾಗಿತ್ತು. ನಮಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಆದರೆ, ದೋಣಿಯನ್ನು ತಾಜ್ ಹೋಟೆಲ್ ಬಳಿಯಿಂದ ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಸದ್ಯ ಕದ್ದ ಕುವೈತ್ ಬೋಟ್ ಅನ್ನು ಗೇಟ್ ವೇ ಆಫ್ ಇಂಡಿಯಾದಲ್ಲಿ ಸುರಕ್ಷಿತವಾಗಿ ನಿಲ್ಲಿಸಲಾಗಿದ್ದು, ಅರಬ್ಬಿ ಸಮುದ್ರದ ಮೂಲಕ ಭಾರತದ ಜಲಪ್ರದೇಶವನ್ನು ಪ್ರವೇಶಿಸಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓದಿ: ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶನ