ಹೈದರಾಬಾದ್: ದೇಶದ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ ಅವರ ಅದ್ಧೂರಿ ಮದುವೆಗೆ ಹೈ ಪ್ರೊಫೈಲ್ ಅತಿಥಿಗಳನ್ನು ಆಹ್ವಾನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಅವರನ್ನು ಆಮಂತ್ರಿಸಿದರು.
ಜುಲೈ 12ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ನಿಗದಿಯಾಗಿದೆ. ಮುಂಬೈನ ಆಂಟಿಲಿಯಾದ ಅಂಬಾನಿ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಅದ್ದೂರಿ ಮದುವೆಗೆ ಅನೇಕ ಕ್ಷೇತ್ರದ ದಿಗ್ಗಜರನ್ನು ಆಹ್ವಾನಿಸಲಾಗುತ್ತಿದೆ. ಉದ್ಯಮಿಗಳು, ಬಾಲಿವುಡ್ ಮತ್ತು ಕ್ರೀಡಾ ಜಗತ್ತಿನ ಖ್ಯಾತನಾಮರು, ರಾಜಕೀಯ ನಾಯಕರು ಸೇರಿದ್ದಾರೆ. ಖ್ಯಾತ ಗಾಯಕ ಜಸ್ಟೀನ್ ಬೀಬರ್ ಈಗಾಗಲೇ ಮುಂಬೈಗೆ ಆಗಮಿಸಿದ್ದು, ಕಾರ್ಯಕ್ರಮದಲ್ಲಿ ವಿಶೇಷ ಪ್ರದರ್ಶನ ನೀಡಲಿದ್ದಾರೆ.
#WATCH | Delhi: Industrialist Mukesh Ambani leaves from 10 Janpath (the residence of Congress Parliamentary Party Chairperson Sonia Gandhi).
— ANI (@ANI) July 4, 2024
As per sources, he has presented Sonia Gandhi, an invitation card to the wedding of his son Anant Ambani. pic.twitter.com/tycvHQzNr0
ಜುಲೈ 12ರಂದು ಶುಭ ವಿವಾಹ್ ನಡೆಯಲಿದೆ. ಅತಿಥಿಗಳು ಸಾಂಪ್ರದಾಯಿಕ ಭಾರತೀಯ ಉಡುಪು ಧರಿಸಲು ವಿನಂತಿಸಲಾಗಿದೆ. ಜುಲೈ 13ರಂದು ಶುಭ ಆಶೀರ್ವಾದ್ ಸಮಾರಂಭವಿದ್ದು, ಭಾರತೀಯ ಔಪಚಾರಿಕ ಉಡುಪು ಧರಿಸಲು ಕೋರಲಾಗಿದೆ. ಜುಲೈ 14ರಂದು, ಭಾರತೀಯ ಚಿಕ್ ಥೀಮ್ ಡ್ರೆಸ್ ಕೋಡ್‌ನೊಂದಿಗೆ ಮಂಗಲ್ ಉತ್ಸವ ಅಥವಾ ವಿವಾಹದ ಆರತಕ್ಷತೆ ನಡೆಯಲಿದೆ.
ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಪ್ರಿ-ವೆಡ್ಡಿಂಗ್ನಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಮತ್ತು ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್, ಆರ್ಎನ್ಬಿ ಸೂಪರ್ಸ್ಟಾರ್ ರಿಹಾನ್ನಾ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಇದಾದ ಬಳಿಕ ಇಟಲಿಯಿಂದ ಫ್ರಾನ್ಸ್ವರೆಗೆ ಐಷಾರಾಮಿ ಕ್ರೂಸ್ನಲ್ಲಿ ವಿವಾಹಪೂರ್ವ ಕಾರ್ಯಕ್ರಮ ನಡೆದಿತ್ತು.
ಲೋಕಸಭಾ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ತಮ್ಮ ಚುನಾವಣಾ ಭಾಷಣಗಳಲ್ಲಿ ಅನೇಕ ಬಾರಿ ಅಂಬಾನಿ ಅವರನ್ನು ಟೀಕಿಸಿದ್ದರು.
ಇದನ್ನೂ ಓದಿ: ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ: 3 ದಿನಗಳ ಮದುವೆ ಸಂಭ್ರಮದ ವೇಳಾಪಟ್ಟಿ ಇಲ್ಲಿದೆ