ನವದೆಹಲಿ: ವಯನಾಡ್ ಭೂಕುಸಿತದ ವಿಚಾರವಾಗಿ ಲೋಕಸಭೆಯಲ್ಲಿ ಬುಧವಾರ ಸಭೆಯ ಗಮನ ಸೆಳೆಯುವ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವಯನಾಡು ವಿಚಾರವಾಗಿ ಕಾಂಗ್ರೆಸ್ ನಾಯಕ ಹಾಗೂ ಈ ಹಿಂದಿನ ವಯನಾಡು ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, "ರಾಹುಲ್ ಗಾಂಧಿ ಅವರು ವಯನಾಡ್ ಸಂಸದರಾಗಿದ್ದಾಗಿನಿಂದ ಕಳೆದ 1800 ದಿನಗಳಲ್ಲಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಒಮ್ಮೆಯೂ ತಮ್ಮ ಕ್ಷೇತ್ರದಲ್ಲಿನ ಭೂಕುಸಿತ ಮತ್ತು ಪ್ರವಾಹದ ಬಗ್ಗೆ ಎಂದಿಗೂ ಪ್ರಸ್ತಾಪಿಸಲಿಲ್ಲ" ಎಂದು ಆರೋಪಿಸಿದರು.
ದೇಶದ ವಿವಿಧ ಭಾಗಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ಗಮನ ಸೆಳೆಯುವ ಮನವಿಯಲ್ಲಿ ಭಾಗವಹಿಸಿದ ಸೂರ್ಯ, "2020ರಲ್ಲಿ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಿಂದ 4000 ಕುಟುಂಬಗಳನ್ನು ಸ್ಥಳಾಂತರಿಸಲು ಸಲಹೆ ನೀಡಿತು. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ವಯನಾಡನ್ನು ಪ್ರತಿನಿಧಿಸುವ ಸಂಸದರು ಇಲ್ಲಿಯವರೆಗೆ ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ." ಎಂದು ಆರೋಪಿಸಿದರು.
ಕೇರಳ ವಿಪತ್ತು ನಿರ್ವಹಣಾ ಮಂಡಳಿಯ ಶಿಫಾರಸುಗಳ ಹೊರತಾಗಿಯೂ ವಯನಾಡಿನಲ್ಲಿ ಅಕ್ರಮ ಒತ್ತುವರಿಯನ್ನು ತೆಗೆದುಹಾಕಲಾಗಿಲ್ಲ. ಕೇರಳದ ಅರಣ್ಯ ಸಚಿವರು ಕೂಡ, ವಿವಿಧ ಧಾರ್ಮಿಕ ಸಂಘಟನೆಗಳ ಒತ್ತಡದಿಂದಾಗಿ ಅಕ್ರಮ ಒತ್ತುವರಿಯನ್ನು ತೆಗೆದುಹಾಕಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ವಿಧಾನಸಭೆಯಲ್ಲಿ ಒಪ್ಪಿಕೊಳ್ಳುತ್ತಾರೆ. ರಾಹುಲ್ ಗಾಂಧಿ ಅವರು ವಯನಾಡ್ ಸಂಸದರಾಗಿದ್ದ ಅವಧಿಯಲ್ಲಿ ಭೂಕುಸಿತ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
"ಕಳೆದ ಐದು ವರ್ಷಗಳಲ್ಲಿ ಕೇರಳ ಪದೇ ಪದೇ ಭೂಕುಸಿತದಂತಹ ಪ್ರಾಕೃತಿಕ ವಿಕೋಪಕ್ಕೆ ಸಾಕ್ಷಿಯಾಗುತ್ತಿದೆ. ಈ ಭೂಕುಸಿತಗಳು ನೂರಾರು ಮುಗ್ಧ ಜನರು ಪ್ರಾಣವನ್ನು ಬಲಿ ತೆಗೆದುಕೊಂಡಿದೆ. 2022ರ ಜುಲೈಯಲ್ಲಿ ಭೂ ವಿಜ್ಞಾನ ಸಚಿವಾಲಯ, ದೇಶದ ಅತೀ ಹೆಚ್ಚು ಭೂಕುಸಿತ ಕೇರಳದಲ್ಲಿ ಸಂಭವಿಸಿದೆ. ಕಳೆದ ಐದು ವರ್ಷಗಳಲ್ಲಿ ದೇಶದೆಲ್ಲೆಡೆ ಸಂಭವಿಸಿದ ಭೂಕುಸಿತ ಪ್ರಕರಣಗಳಲ್ಲಿ ಅತೀ ಹೆಚ್ಚು ಕೇರಳದಲ್ಲಿ ಸಂಭವಿಸಿದೆ. ಈ ಸಮಸ್ಯೆ ಬಗೆಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾ ರೀತಿಯ ದೀರ್ಘಕಾಲೀನ ಕ್ರಮಗಳನ್ನು ಕೈಗೊಂಡಿದೆ ಎನ್ನುವ ಮಾಹಿತಿಯನ್ನು ನೀಡಬೇಕು" ಎಂದು ಕೇಳಿದರು.
ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಅವರು ಮಾಡಿದ ಹೇಳಿಕೆಗಳಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಲೋಕಸಭೆ ಕಲಾಪವನ್ನು ಸ್ವಲ್ಪ ಸಮಯ ಮುಂದೂಡಲಾಯಿತು.
ಸದನ ಪುನರಾರಂಭಗೊಳ್ಳುತ್ತಿದ್ದಂತೆ, ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಅವರು, ವಯನಾಡ್ ಸಂಸದರಾಗಿ ರಾಹುಲ್ ಗಾಂಧಿಯವರು ಪರಿಸರ ಸೂಕ್ಷ್ಮ ವಯನಾಡ್ ವಿಷಯವನ್ನು ಹಲವಾರು ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದಾರೆ. ರಾಹುಲ್ ಗಾಂಧಿ ಈ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ ಎಂಬುದನ್ನು ಸದನದ ದಾಖಲೆಗಳೇ ಸಾಬೀತುಪಡಿಸುತ್ತವೆ ಎಂದು ಪ್ರತಿಪಾದಿಸಿದರು. ತೇಜಸ್ವಿ ಸೂರ್ಯ ಅವರು ಸದನದ ಚರ್ಚೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಾಗೂ ರಾಹುಲ್ ಗಾಂಧಿ ಅವರ ಬಗ್ಗೆ ನೀಡಿರುವ "ಸುಳ್ಳು ಹೇಳಿಕೆ" ಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ, ಭೂಕುಸಿತ ಪೀಡಿತ ವಯನಾಡ್ ಜನರಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವಂತೆ ಮತ್ತು ಅಲ್ಲಿನ ಪರಿಸರ ಸಮಸ್ಯೆಯನ್ನು ಪರಿಶೀಲಿಸಬೇಕು. ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಡೆಯಲು ಕೇಂದ್ರವು ಹೈಟೆಕ್ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಜೊತೆಗೆ ವಯನಾಡಲ್ಲಿ ರಕ್ಷಣಾ ಕೆಲಸದಲ್ಲಿರುವ ಅಲ್ಲಿನ ಸೇನೆಯ ಪ್ರಯತ್ನಗಳನ್ನು ಶ್ಲಾಘಿಸಿದರು.