ಇಂದೋರ್ (ಮಧ್ಯಪ್ರದೇಶ): ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ನೋಟಾ ಮತಗಳು ಚಲಾವಣೆಯಾಗಿವೆ. ಇಂದೋರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರಿದ್ದರು. ಹೀಗಾಗಿ, ಕಾಂಗ್ರೆಸ್ ನೋಟಾಗೆ ಮತ ಹಾಕುವಂತೆ ದೊಡ್ಡಮಟ್ಟದಲ್ಲಿ ಪ್ರಚಾರ ಆರಂಭಿಸಿತ್ತು. ಇದರ ಪರಿಣಾಮ 2,18,674 ಮತಗಳು ನೋಟಾಗೆ ಚಲಾವಣೆಯಾಗಿವೆ.
ಇಂದೋರ್‌ನಲ್ಲಿ ಬಿಜೆಪಿಯಿಂದ ಶಂಕರ್ ಲಾಲ್ವಾನಿ ಸ್ಪರ್ಧೆಯಲ್ಲಿದ್ದರು. ಕಾಂಗ್ರೆಸ್ ಅಕ್ಷಯ್ ಕಾಂತಿ ಬಾಮ್ ಅವರಿಗೆ ಟಿಕೆಟ್ ನೀಡಿತ್ತು. ಆದರೆ, ಅಕ್ಷಯ್ ಕಾಂತಿ ಬಾಮ್ ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದಿದ್ದರು. ಅಲ್ಲದೇ, ಕೊನೆಯ ಕ್ಷಣದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಹೀಗಾಗಿ, ಕಾಂಗ್ರೆಸ್ಗೆ ಬದಲಿ ಅಭ್ಯರ್ಥಿಯನ್ನು ನಿಲ್ಲಿಸಲು ಸಹ ಸಾಧ್ಯವಾಗಿರಲಿಲ್ಲ. ಇದರಿಂದ ಇಂದೋರ್‌ನ ಕಾಂಗ್ರೆಸ್ಸಿಗರಿಗೆ ಮಾತ್ರವಲ್ಲದೇ, ಸಾರ್ವಜನಿಕರಿಗೂ ತಪ್ಪು ಸಂದೇಶ ರವಾನೆಯಾಗಿತ್ತು.
ಖುದ್ದಾಗಿ ಈ ಬಗ್ಗೆ ಬಿಜೆಪಿಯ ಹಿರಿಯ ನಾಯಕಿ, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡ ತೀವ್ರ ಅತೃಪ್ತಿ ಹೊರಹಾಕಿದ್ದರು. ರಾಜಕೀಯ ಮತ್ತು ಚುನಾವಣೆಯಲ್ಲಿ ಈ ರೀತಿಯ ಚಟುವಟಿಕೆಯನ್ನು ಸುಮಿತ್ರಾ ಪ್ರಬಲವಾಗಿ ಖಂಡಿಸಿದ್ದರು. ಜೊತೆಗೆ ಹಲವು ಸಾಮಾಜಿಕ ಸಂಘಟನೆಗಳೂ ವಿರೋಧ ವ್ಯಕ್ತಪಡಿಸಿ ಅಸಮಾಧಾನ ವ್ಯಕ್ತಪಡಿಸಿದ್ದವು. ಹಲವು ಹಿರಿಯ ನಾಗರಿಕರು ಸುಮಿತ್ರಾ ಮಹಾಜನ್ ಅವರಿಗೆ ಕರೆ ಮಾಡಿ, ಇಲ್ಲಿಯವರೆಗೆ ಬಿಜೆಪಿಗೆ ಮತ ಹಾಕುತ್ತಿದ್ದೆವು. ಈ ಬಾರಿ ನೋಟಾಕ್ಕೆ ಮತ ಹಾಕುತ್ತೇವೆ ಎಂದು ಘೋಷಿಸಿದ್ದರು. ಮತ್ತೊಂದೆಡೆ, ಕಾಂಗ್ರೆಸ್ ನೋಟಾಗೆ ಮತ ಹಾಕುವಂತೆ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿತ್ತು.
ನೋಟಾಗೆ 2.18 ಲಕ್ಷ ಮತ: ಈಗ ಚುನಾವಣೆಯ ಫಲಿತಾಂಶದಲ್ಲಿ ಈ ಬೆಳವಣಿಗೆಗಳ ಪರಿಣಾಮ ಸ್ಪಷ್ಟವಾಗಿ ಹೊರಬಂದಿದೆ. ಬಿಜೆಪಿಯ ಶಂಕರ್ ಲಾಲ್ವಾನಿ ಮತ್ತು ನೋಟಾ ನಡುವೆ ಪೈಪೋಟಿ ಏರ್ಪಟ್ಟಂತಿತ್ತು. ಮತದಾರರು ನೋಟಾ ಪರವಾಗಿ 2,18,674 ಮತಗಳನ್ನು ಚಲಾವಣೆ ಮಾಡಿದ್ದಾರೆ. ಇದುವರೆಗಿನ ಚುನಾವಣೆಗಳಲ್ಲಿ ನೋಟಾ ಅತ್ಯಧಿಕ ದಾಖಲೆ ಬರೆದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನೋಟಾ ಪರವಾಗಿ 51,607 ಮತಗಳು ಚಲಾವಣೆಯಾಗಿದ್ದವು.
ಎರಡನೇ ಸ್ಥಾನದಲ್ಲಿ ನೋಟಾ: ಇಂದೋರ್ ಕ್ಷೇತ್ರದಲ್ಲಿ ನೋಟಾ ಎರಡನೇ ಸ್ಥಾನದಲ್ಲಿ ಪಡೆದಿದೆ. ಬಿಜೆಪಿಯ ಶಂಕರ್ ಲಾಲ್ವಾನಿ ದಾಖಲೆಯ 12,26,751 ಮತಗಳನ್ನು ಪಡೆದು 10,08,077 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ನೋಟಾಗೆ 2,18,674 ಮತಗಳು ಚಲಾವಣೆಯಾಗಿವೆ. ಬಿಎಸ್ಪಿ ಅಭ್ಯರ್ಥಿ 51,659 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಅಚ್ಚರಿ: ಎಸ್ಪಿ, ಕಾಂಗ್ರೆಸ್ ಮೈತ್ರಿಕೂಟ 40 ಸ್ಥಾನಗಳಲ್ಲಿ ಮುನ್ನಡೆ, ಬಿಜೆಪಿಗೆ 37 ಕಡೆ ಮುನ್ನಡೆ