ನವದೆಹಲಿ: ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆ ಅಥವಾ ತೆಹಖಾನಾದಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯದ ಆದೇಶದ ವಿರುದ್ಧ ಅಂಜುಮನ್ ಇಂತೆಝಾಮಿಯಾ ಮಸೀದಿ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಡೆಸಲಿದೆ. ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಪ್ರಕಟವಾದ ವಿಚಾರಣಾ ಪಟ್ಟಿಯ ಪ್ರಕಾರ, ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಜುಲೈ 23 ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ.
ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಸಮುದಾಯದವರು ಪ್ರಾರ್ಥನೆ ನಡೆಸುವ ಬಗ್ಗೆ ಜನವರಿ 31 ರ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ನ ನಿರ್ಧಾರಕ್ಕೆ ಯಾವುದೇ ಮಧ್ಯಂತರ ಆದೇಶ ನೀಡಲು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ನ್ಯಾಯಪೀಠವು ಏಪ್ರಿಲ್ನಲ್ಲಿ ನಿರಾಕರಿಸಿತ್ತು.
ಎರಡೂ ಸಮುದಾಯಗಳಿಗೆ ಧಾರ್ಮಿಕ ಪೂಜೆ ಸಲ್ಲಿಸಲು ಅವಕಾಶ ನೀಡುವ ಮೂಲಕ ವಿವಾದಿತ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
"ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಆದೇಶಗಳ ನಂತರ ನಮಾಜ್ ಮಾಡಲು ಮುಸ್ಲಿಂ ಸಮುದಾಯದವರಿಗೆ ಯಾವುದೇ ಅಡ್ಡಿ ಉಂಟಾಗಿಲ್ಲ ಮತ್ತು ಹಿಂದೂ ಪುರೋಹಿತರು ಪೂಜೆ ಮಾಡುವ ವಿಚಾರವು ನೆಲಮಾಳಿಗೆಗೆ ಸಂಬಂಧಿಸಿದ್ದಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಎರಡೂ ಸಮುದಾಯಗಳಿಗೆ ಧಾರ್ಮಿಕ ಪೂಜೆ ಸಲ್ಲಿಸಲು ಅವಕಾಶ ನೀಡುವ ಮೂಲಕ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದು ಸೂಕ್ತವಾಗಿದೆ." ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅಲ್ಲದೆ ತನ್ನ ಅನುಮತಿಯಿಲ್ಲದೆ ಯಥಾಸ್ಥಿತಿಗೆ ಯಾವುದೇ ಭಂಗ ತರಕೂಡದು ಎಂದು ಅದು ಆದೇಶಿಸಿದೆ.
ಜುಲೈನಲ್ಲಿ ಅಂತಿಮ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್, ಏಪ್ರಿಲ್ 30 ರೊಳಗೆ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಪ್ರತಿವಾದಿಗೆ ಆದೇಶಿಸಿತ್ತು.
ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜನವರಿ 31 ರಂದು ಅಸ್ತಿತ್ವದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿನ ಸೀಲ್ ಮಾಡಿದ ನೆಲಮಾಳಿಗೆ ಅಥವಾ ತೆಹಖಾನಾ ಅಥವಾ ವ್ಯಾಸ್ ಜಿ ಕಾ ತೆಹಖಾನಾ ಎಂದು ಕರೆಯಲ್ಪಡುವ ಸ್ಥಳದಲ್ಲಿ ಪೂಜಾ ವಿಧಿಗಳನ್ನು ನಡೆಸಲು ಹಿಂದೂ ಪಕ್ಷಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು.
1993ರಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸರ್ಕಾರವು ನಿರ್ಬಂಧ ವಿಧಿಸುವವರೆಗೂ ಸೋಮನಾಥ್ ವ್ಯಾಸ್ ಎಂಬುವರ ಕುಟುಂಬವು ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಮತ್ತು ಧಾರ್ಮಿಕ ಪ್ರಾರ್ಥನೆಗಳನ್ನು ಸಲ್ಲಿಸುತ್ತಿತ್ತು ಎಂದು ಹಿಂದೂ ಪಕ್ಷಗಾರರು ವಾದಿಸಿದ್ದಾರೆ. ಮುಸ್ಲಿಂ ಕಡೆಯವರು ಈ ವಾದವನ್ನು ವಿರೋಧಿಸಿದ್ದು, ಮುಸ್ಲಿಮರು ಯಾವಾಗಲೂ ಮಸೀದಿಯ ಕಟ್ಟಡದ ಮೇಲೆ ಹಿಡಿತ ಹೊಂದಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : 2050ರ ವೇಳೆಗೆ ಭಾರತದಲ್ಲಿ ವೃದ್ಧರ ಜನಸಂಖ್ಯೆ ದುಪ್ಟಟ್ಟು: ಯುಎನ್ಎಫ್ಪಿಎ ಮುಖ್ಯಸ್ಥೆ - Elderly Population In India