ತೂತುಕುಡಿ (ತಮಿಳುನಾಡು): ಮೀನು ಫ್ಯಾಕ್ಟರಿಯಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ 30ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಅಸ್ವಸ್ಥಗೊಂಡು ಮೂರ್ಛೆ ಹೋಗಿರುವ ಘಟನೆ ತಮಿಳುನಾಡಿನ ತೂತುಕುಡಿಯ ಪುತ್ತೂರು ಪಾಂಡಿಯಪುರಂ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೀನುಗಳನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡುವ ಖಾಸಗಿ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿ ತಮಿಳುನಾಡು ಹಾಗೂ ಇತರೆ ರಾಜ್ಯಗಳ 500ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈ ವೇಳೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಘಟಕದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಅಮೋನಿಯಾ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದಾಗಿ ಅಮೋನಿಯಾ ಅನಿಲವು ಸೋರಿಕೆಯಾಗಿದೆ.
ತಮಿಳುನಾಡಿನ ಕುಂಭಕೋಣಂ ಪ್ರದೇಶದ ಐವರು ಮಹಿಳೆಯರು ಮತ್ತು ಒಡಿಶಾ ರಾಜ್ಯದ 16 ಮಹಿಳೆಯರು, ಸೇರಿದಂತೆ 30ಕ್ಕೂ ಹೆಚ್ಚು ಮಹಿಳೆಯರು ಉಸಿರುಗಟ್ಟುವಿಕೆ ಮತ್ತು ಕಣ್ಣಿನ ಸಮಸ್ಯೆಯಿಂದ ಬಳಲಿ ಅಸ್ವಸ್ಥಗೊಂಡಿದ್ದರು. ಈ ಬೆನ್ನಲ್ಲೇ ಖಾಸಗಿ ಕಂಪನಿ ವಾಹನಗಳು ಹಾಗೂ ಆಂಬ್ಯುಲೆನ್ಸ್ಗಳ ಮೂಲಕ ಮಹಿಳಾ ಉದ್ಯೋಗಿಗಳನ್ನು ತೂತುಕುಡಿಯ ಎರಡು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಕುರಿತು ಪುತಿಯಂಬುತ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೂತುಕುಡಿಯ ಖಾಸಗಿ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಗ್ಯಾಸ್ ಲೀಕ್ ಆಗಿದ್ದರಿಂದ ಮಹಿಳಾ ಉದ್ಯೋಗಿಗಳ ಉಸಿರುಗಟ್ಟಿ ಮೂರ್ಛೆ ಹೋಗಿರುವ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.