ನವದೆಹಲಿ: ದೇಶದ ಪ್ರಧಾನಿಯಾಗಿ 3ನೇ ಅವಧಿಗೆ ಪ್ರಮಾಣವಚನ ಕೈಗೊಳ್ಳುವ ಮುನ್ನ ಇಂದು ಬೆಳಗ್ಗೆ ನರೇಂದ್ರ ಮೋದಿ ರಾಜ್‌ಘಾಟ್‌ಗೆ ತೆರಳಿ ಮಹಾತ್ಮಾ ಗಾಂಧಿಗೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೋದಿ ಜೊತೆಗೆ ಹರ್ದೀಪ್ ಸಿಂಗ್ ಪುರಿ ಇದ್ದರು.
ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಮೋದಿ ಅವರೊಂದಿಗೆ ಸಚಿವ ಸಂಪುಟದ ಸದಸ್ಯರು ಪ್ರಮಾಣವಚನ ಕೈಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿ ಭವನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ರಾಜಧಾನಿಗೆ ವಿದೇಶಿ ಗಣ್ಯರ ಆಗಮನವಾಗುತ್ತಿದೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ದೆಹಲಿ ಪೊಲೀಸ್ ಇಲಾಖೆಯಿಂದ 1,100 ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಎನ್‌ಎಸ್‌ಜಿ ಕಮಾಂಡೋಗಳು, ಡ್ರೋಣ್‌ಗಳು, ಸ್ನೈಫರ್‌ಗಳ ಮೂಲಕ ಕಣ್ಗಾವಲಿರಿಸಲಾಗಿದೆ. ರಾಜಧಾನಿ ಪ್ರದೇಶದಲ್ಲಿ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದುಕೊಂಡಿದೆ. 2019 ರ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಜಯಿಸಿತ್ತು. ಅದೇ ರೀತಿ, 2014ರಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ: 3ನೇ ಅವಧಿಗೆ ದೇಶದ ಪ್ರಧಾನಿಯಾಗಿ ಇಂದು ಸಂಜೆ ಮೋದಿ ಪ್ರಮಾಣ - Modi Oath Taking Ceremony