ಥಾಣೆ (ಮಹಾರಾಷ್ಟ್ರ) : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿಯಲ್ಲಿ ಗುರುವಾರ ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ನಂತರ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮಹಿಳೆಯರು ಸೇರಿ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ, ಅಧ್ಯಕ್ಷೆ ದ್ರೌಪದಿ ಮುರ್ಮು ಈ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಡೊಂಬಿವಿಲಿ ಎಂಐಡಿಸಿ ಪ್ರದೇಶದ 2ನೇ ಹಂತದಲ್ಲಿರುವ ಅಂಬರ್ ಕೆಮಿಕಲ್ ಕಂಪನಿಯಲ್ಲಿ ಈ ಭೀಕರ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ಧವು ಒಂದು ಕಿಲೋಮೀಟರ್ ದೂರಕ್ಕೆ ಕೇಳುವಷ್ಟು ಜೋರಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪರಿಣಾಮ ಅಕ್ಕಪಕ್ಕದ ಕಟ್ಟಡದ ಗಾಜಿನ ಕಿಟಕಿಗಳು ಒಡೆದಿದ್ದು, ಸುತ್ತಮುತ್ತಲಿನ ಹಲವು ಮನೆಗಳಿಗೆ ಹಾನಿಯಾಗಿದೆ. ಗಾಯಗೊಂಡ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ 1.40ರ ಸುಮಾರಿಗೆ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಥಾಣೆ ನಾಗರಿಕ ಸಂಸ್ಥೆಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಯಾಸಿನ್ ತದ್ವಿ ಹೇಳಿದ್ದಾರೆ. ಸ್ಫೋಟದಿಂದ ಉಂಟಾದ ಬೆಂಕಿ ಅಕ್ಕಪಕ್ಕದ ಮೂರು ಕಾರ್ಖಾನೆಗಳಿಗೆ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಿಗೆಯಿಂದಾದ ದಟ್ಟವಾದ ಹೊಗೆ ಬಹಳ ದೂರದವರೆಗೆ ವ್ಯಾಪಿಸಿದೆ ಎಂದು ಅವರು ಹೇಳಿದರು.
ಸ್ಥಳಕ್ಕೆ ಬರುವಂತೆ ಅಗ್ನಿಶಾಮಕ ಬ್ರಿಗೇಡ್ಗೆ ಕರೆ ಮಾಡಲಾಯಿತು. ನಂತರ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು ಎಂದು ತಾದ್ವಿ ಹೇಳಿದರು. ಥಾಣೆ ನಾಗರಿಕ ಸಂಸ್ಥೆಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೇಂದ್ರದ ತಂಡಗಳು ಮತ್ತು ಥಾಣೆ ವಿಪತ್ತು ನಿರ್ವಹಣಾ ಪಡೆಯ 13 ಯೋಧರು ಕೂಡ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಈ ಬಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿದ್ದು, ಈ ಘಟನೆ ಅತಿದೊಡ್ಡ ದುರಂತ. ಫ್ಯಾಕ್ಟರಿ ಆವರಣದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು,'' ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಮತ್ತು ಹೆಚ್ಚಿನ ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ನಾನು ಥಾಣೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಮತ್ತು ಅವರು ಕೂಡ ಸ್ಥಳಕ್ಕೆ ತಲುಪಿದ್ದಾರೆ. ಎನ್‌ಡಿಆರ್‌ಎಫ್, ಟಿಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ತಂಡಗಳನ್ನು ಕರೆಸಲಾಗಿದೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.
ಇದನ್ನೂ ಓದಿ : ಕೆರೆ ಬಳಿ ಬಾಂಬ್ ಸ್ಪೋಟ: ಬಾಲಕ ಸಾವು, ಇಬ್ಬರು ಮಕ್ಕಳಿಗೆ ಗಾಯ - Bomb Blast