ಜೈಪುರ: ರಾಜಸ್ಥಾನದಲ್ಲಿ ಸೂರ್ಯ ಜನರು, ಜಾನುವಾರುಗಳು ಸೇರಿದಂತೆ ಇತರ ಜೀವಿಗಳ ನೆತ್ತಿಯನ್ನು ಸುಡುತ್ತಿದ್ದಾನೆ. ಬೆಳಗ್ಗೆ ಆಗುತ್ತಿದ್ದಂತಲೇ ಇಲ್ಲಿ ಸೂರ್ಯ ನಿಗಿ ನಿಗಿ ಕೆಂಡದಂತೆ ಉರಿ ಉರಿದು ಬೀಳುತ್ತಿದ್ದಾನೆ. ಉತ್ತರ ಭಾರತದಲ್ಲಿ, ಅದರಲ್ಲೂ ರಾಜಸ್ಥಾನದಲ್ಲಂತೂ ಬಿಸಿಲಿನ ಬೇಗೆ ಮುಂದುವರಿದಿದೆ. ಈ ರಾಜ್ಯದ ಬಾರ್ಮರ್‌ನಲ್ಲಿ ಗರಿಷ್ಠ ತಾಪಮಾನ 46.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲಿನ ತಾಪ ಏರುಗತಿಯಲ್ಲೇ ಸಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ತೆಲಂಗಾಣ ಸೇರಿದಂತೆ ಈ ಬಾರಿ ದಕ್ಷಿಣದ ರಾಜ್ಯಗಳಲ್ಲಿ ಈ ಬಾರಿಯ ಬೇಸಿಗೆ ಜನರನ್ನು ಹೈರಾಣಾಗಿಸಿತ್ತು. ಆದರೆ ಕೆಲ ದಿನಗಳಿಂದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಮುಂಗಾರು ಪೂರ್ವ ಮಳೆ ಆಗುತ್ತಿರುವುದರಿಂದ ತುಸು ತಣ್ಣಗಾಗಿದೆ. ಅಂದರೆ ಬಿಸಿಲಿನ ಪ್ರಖರತೆ ಕೊಂಚ ತಗ್ಗಿದೆ. ಆದರೆ ಚುನಾವಣೆ ಕಾವು ಏರುತ್ತಿರುವಂತೆ ಉತ್ತರ ಭಾರತ ಕೊತ ಕೊತ ಕುದಿಯುತ್ತಿದೆ.
ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ ರಾಜಸ್ಥಾನದಲ್ಲಿ ಭಾರಿ ಬಿಸಿಲು ಇನ್ನೂ ಒಂದು ವಾರ ಮುಂದುವರಿಯುತ್ತದೆ. ಈ ಅವಧಿಯಲ್ಲಿ, ಅನೇಕ ಪ್ರದೇಶಗಳಲ್ಲಿ ಶಾಖದ ಅಲೆಗಳು ಬಲವಾಗಿ ಬೀಸಲಿದ್ದು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ. ಜೈಪುರದ ಮೆಟ್ ಸೆಂಟರ್ ವರದಿಯಂತೆ, ಶುಕ್ರವಾರದ ಗರಿಷ್ಠ ತಾಪಮಾನವು ಬಾರ್ಮರ್‌ನಲ್ಲಿ 46.5 ಡಿಗ್ರಿ ದಾಖಲಾಗಿತ್ತು. ಇನ್ನುಳಿದಂತೆ ಧೋಲ್‌ಪುರದಲ್ಲಿ 46.4 ಡಿಗ್ರಿ, ಫತೇಪುರ್ (ಸಿಕರ್) 46.3 ಡಿಗ್ರಿ, ಫಲೋಡಿಯಲ್ಲಿ 46 ಡಿಗ್ರಿ, ಪಿಲಾನಿ (ಜುಂಜುನು), 45.8 ಡಿಗ್ರಿ (ಜುಂಜುನು), 45.8 ಡಿಗ್ರಿ ) ಮತ್ತು ಜೈಸಲ್ಮೇರ್ ಹಾಗೂ ಚುರುದಲ್ಲಿ 45.7 ಡಿಗ್ರಿ ಹಾಗೂ ಜೋಧಪುರ, ಕರೌಲಿಯಲ್ಲಿ 45.5. ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಅಂಕಿ- ಅಂಶ ಸಮೇತ ಮಾಹಿತಿ ನೀಡಿದೆ.
ರಾಜ್ಯದ ಬಹುತೇಕ ಕಡೆ ದಿನದ ಉಷ್ಣಾಂಶ ಸಾಮಾನ್ಯಕ್ಕಿಂತ ಎರಡರಿಂದ ನಾಲ್ಕು ಡಿಗ್ರಿ ಹೆಚ್ಚಿದೆ. ಕಳೆದ ರಾತ್ರಿ ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನ 25.5 ಡಿಗ್ರಿ ಸೆಲ್ಸಿಯಸ್ ನಿಂದ 35 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.