ಲಕ್ನೋ: ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಮಾಯಾವತಿ ಮಂಗಳವಾರ ಮರು ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಎಸ್ಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತಿಲ್ಲ ಎಂದು ಇತ್ತೀಚೆಗಷ್ಟೇ ಹೇಳಿದ್ದ ಮಾಯಾವತಿ ಮತ್ತೊಮ್ಮೆ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ.
ತಾವು ನಿವೃತ್ತಿಯಾಗುತ್ತಿರುವುದಾಗಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದ ಮಾಯಾವತಿ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ ಎಂದು ಸೋಮವಾರ ಹೇಳಿದ್ದರು.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ನಾನು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ. ನನ್ನ ಅನುಪಸ್ಥಿತಿಯಲ್ಲಿ ಅಥವಾ ನನಗೆ ತೀವ್ರ ಅನಾರೋಗ್ಯ ಉಂಟಾದ ಸಮಯದಲ್ಲಿ ಪಕ್ಷವು ಆಕಾಶ್ ಆನಂದ್ ಅವರನ್ನು ಬಿಎಸ್ಪಿಯ ಉತ್ತರಾಧಿಕಾರಿಯಾಗಿ ಮುಂದಿಟ್ಟಾಗಿನಿಂದ, ಜಾತಿವಾದಿ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ಈ ಬಗ್ಗೆ ಜನರು ಜಾಗರೂಕರಾಗಿರಬೇಕು" ಎಂದು ಬರೆದಿದ್ದಾರೆ.
ಇದಕ್ಕೂ ಮುನ್ನ ಭಾನುವಾರ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ (ಎಸ್ಪಿ) ವಿರುದ್ಧ ಕಿಡಿ ಕಾರಿದ ಮಾಯಾವತಿ, ಈ ಎರಡೂ ಪಕ್ಷಗಳು ಮೀಸಲಾತಿ ವಿರೋಧಿಯಾಗಿದ್ದು ಭವಿಷ್ಯದಲ್ಲಿ ಇವುಗಳೊಂದಿಗೆ ಯಾವುದೇ ಮೈತ್ರಿ ಸಾಧ್ಯವೇ ಇಲ್ಲ ಎಂದರು. ಸಂವಿಧಾನದ ಮುಖ್ಯ ಶಿಲ್ಪಿ ಬಾಬಾ ಸಾಹೇಬ್ ಅವರಿಗೆ ಅವರ ಜೀವಿತಾವಧಿಯಲ್ಲಿ ಮತ್ತು ಅವರ ಮರಣದ ನಂತರ ಭಾರತ ರತ್ನ ಬಿರುದನ್ನು ನೀಡಿ ಗೌರವಿಸದಿದ್ದಕ್ಕಾಗಿ ಬಾಬಾ ಸಾಹೇಬ್ ಅವರ ಅನುಯಾಯಿಗಳು ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
"ಅಲ್ಲದೆ, ಬಾಬಾ ಸಾಹೇಬ್ ಅವರ ಚಳವಳಿಗೆ ಬೆಂಬಲ ನೀಡಿದ ಕಾನ್ಶಿರಾಮ್ ಜಿ ನಿಧನರಾದಾಗ, ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅವರ ಗೌರವಾರ್ಥ ಒಂದು ದಿನ ಕೂಡ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಿಲ್ಲ ಮತ್ತು ರಾಜ್ಯದಲ್ಲಿನ ಎಸ್ಪಿ ನೇತೃತ್ವದ ಸರ್ಕಾರ ಸಹ ಶೋಕಾಚರಣೆಯನ್ನು ಘೋಷಿಸಲಿಲ್ಲ. ಇಂತಹ ದ್ವಂದ್ವ ನಿಲುವು, ನಡವಳಿಕೆ ಮತ್ತು ಚಾರಿತ್ರ್ಯದ ಬಗ್ಗೆ ಜನತೆ ಜಾಗರೂಕರಾಗಿರಿ" ಎಂದು ಮಾಯಾವತಿ ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ತಾನು ಅಧಿಕಾರದಲ್ಲಿದ್ದಾಗ ರಾಷ್ಟ್ರೀಯ ಜಾತಿ ಗಣತಿಯನ್ನು ಏಕೆ ನಡೆಸಲಿಲ್ಲ ಮತ್ತು ಈಗ ಅವರು ಅದರ ಬಗ್ಗೆ ಮಾತನಾಡುತ್ತಿರುವುದೇಕೆ ಎಂದು ಮಾಯಾವತಿ ಪ್ರಶ್ನಿಸಿದರು. ದುರ್ಬಲ ವರ್ಗಗಳ ಹಿತದೃಷ್ಟಿಯಿಂದ ಜಾತಿಗಣತಿ ನಡೆಯುವುದು ಅಗತ್ಯವಾಗಿರುವುದರಿಂದ ಬಿಎಸ್ಪಿ ಜಾತಿಗಣತಿಯ ಪರವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಸಂಪೂರ್ಣ ಜ್ಞಾನವಾಪಿ ಆವರಣದ ಸಮೀಕ್ಷೆ ಕೋರಿದ್ದ ಅರ್ಜಿ ವಿಚಾರಣೆ ಇಂದು - Gyanvapi