ಜಲ್ನಾ( ಮಹಾರಾಷ್ಟ್ರ): ಮರಾಠಾ ಮೀಸಲಾತಿಗಾಗಿ ಮನೋಜ್ ಜಾರಂಗೆ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ನಡುವೆ ಮರಾಠಾ ಸಮುದಾಯ ಜಲ್ನಾ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಬಂದ್‌ಗೆ ಕರೆ ನೀಡಿದೆ. ಈ ನಡುವೆ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಮನೋಜ್ ಜಾರಂಗೆ ಅವರು ಆಹಾರ ಸ್ವೀಕರಿಸಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ ವೈದ್ಯರಿಂದ ಚಿಕಿತ್ಸೆ ಪಡೆಯಲು ಒಲ್ಲೆ ಎಂದಿದ್ದಾರೆ.
ಮತ್ತೊಂದು ಕಡೆ ಮಂಗಳವಾರ ರಾತ್ರಿ ಕೇದಾರಖೇಡ ಗ್ರಾಮದಲ್ಲಿ ಮರಾಠಾ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಜಲ್ನಾದ ಭೋಕರ್ದನ್ ಮುಖ್ಯ ಹೆದ್ದಾರಿಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಂತರವಳ್ಳಿ ಸಾರತಿ ಗ್ರಾಮದಲ್ಲಿ ಮನೋಜ್ ಜಾರಂಗೆ ಮತ್ತೆ ಪ್ರತಿಭಟನೆ ಆರಂಭಿಸಿದ್ದರಿಂದ ಮರಾಠಾ ಸಮುದಾಯ ಆಕ್ರೋಶಗೊಂಡಿದೆ. ಇಡೀ ಮರಾಠ ಸಮುದಾಯದ ವತಿಯಿಂದ ಇಂದು ಬಂದ್‌ಗೆ ಕರೆ ನೀಡಲಾಗಿದೆ. ನಿನ್ನೆ ರಾತ್ರಿಯೇ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಎರಡು ಕಡೆ ವಾಹನಗಳ ಸಾಲು ಸಾಲು ಕಂಡು ಬಂತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ಪ್ರತಿಭಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಶಾಂತ ರೀತಿಯಿಂದ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದರು. ಶಾಂತಿ ಸುವ್ಯವಸ್ಥೆಗೆ ಭಂಗ ತರದಂತೆ ಸಾರ್ವಜನಿಕರಲ್ಲೂ ಪೊಲೀಸರು ಮನವಿ ಮಾಡಿದರು.
ವೈದ್ಯರಿಂದ ಚಿಕಿತ್ಸೆಗೂ ನಿರಾಕರಣೆ: ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಈಡೇರಿಕೆಗಾಗಿ ಅಂತರವಾಲಿ ಸಾರತಿ ಗ್ರಾಮದಲ್ಲಿ ಮನೋಜ್ ಜಾರಂಗೆ ಮತ್ತೆ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಇಂದು ಅವರ ಉಪವಾಸದ ಐದನೇ ದಿನ. ಈ ಆಮರಣಾಂತ ಉಪವಾಸದಲ್ಲಿ ಮನೋಜ್ ಜಾರಂಗೆ ಆಹಾರ ಮತ್ತು ನೀರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಚಿಕಿತ್ಸೆ ಪಡೆಯಲು ಕೂಡಾ ನಿರಾಕರಿಸಿದ್ದರು. ಇದರಿಂದ ಅವರ ಸ್ಥಿತಿ ಹದಗೆಟ್ಟಿದೆ.
ಈ ಮೊದಲು ಉಪವಾಸ ಸತ್ಯಾಗ್ರಹ ಕುಳಿತುಕೊಂಡಾಗ ಸರ್ಕಾರ ಅವರ ಬೇಡಿಕೆ ಈಡೇರಿಸುವ ವಾಗ್ದಾನ ಮಾಡಿತ್ತು. ಆದರೆ ಜಾರಂಗೆ ನೀಡಿದ ಗಡವು ಮೀರಿರುವ ಹಿನ್ನೆಲೆಯಲ್ಲಿ ಅವರು ಮತ್ತೆ ಸರ್ಕಾರದ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ಹೂಡಿದ್ದಾರೆ. ಈ ಬಾರಿ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತೆ, ಭರವಸೆ ಈಡೇರಿಸುತ್ತಾ ಅಥವಾ ಮನೋಜ್ ಅವರ ಮನವೊಲಿಸುತ್ತಾ ಕಾದು ನೋಡಬೇಕಿದೆ.
ಇದನ್ನು ಓದಿ:ದೆಹಲಿ ಚಲೋ ಹೋರಾಟ: ಭೋಪಾಲ್‌ನಲ್ಲಿ ಕರ್ನಾಟಕದ ರೈತರು ಪೊಲೀಸ್ ವಶಕ್ಕೆ, ಉಜ್ಜಯಿನಿಗೆ ಸ್ಥಳಾಂತರ