ಕಿಶನ್‌ಗಂಜ್(ಬಿಹಾರ): ವಿದೇಶದಿಂದ ಬಂದ ಸೋದರ ಮಾವನನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರಲು ಹೋದ ಕುಟುಂಬವೊಂದು ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದೆ. ಸ್ಕಾರ್ಪಿಯೋ ವಾಹನ ಮತ್ತು ಡಂಪರ್ ನಡುವಿನ ಡಿಕ್ಕಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ದುರಂತ ಸಾವಿಗೀಡಾಗಿದ್ದಾರೆ. ಜೊತೆಗೆ 6 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೃತರನ್ನು ಕಾರು ಚಲಾಯಿಸುತ್ತಿದ್ದ ಮೊಹಮ್ಮದ್ (30 ವರ್ಷ), ಮೊಹಮದ್ ಅಫ್ಫಾನ್ (4 ವರ್ಷ), ಗುಲ್ಶನ್ ಅರಾ (27 ವರ್ಷ), ಗುಡಿಯಾ ಬೇಗಂ (13 ವರ್ಷ) ಮತ್ತು ಅಯಾನ್ (8 ವರ್ಷ) ಎಂದು ಗುರುತಿಸಲಾಗಿದೆ. ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಗಾಯಗೊಂಡ ಮಕ್ಕಳನ್ನು ಕಿಶನ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾವನಿಗಾಗಿ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಕುಟುಂಬ: ವಿದೇಶದಿಂದ ಸೋದರ ಮಾವ ಊರಿಗೆ ಬರುತ್ತಿದ್ದು, ಅವರನ್ನು ಕರೆದುಕೊಂಡು ಬರುವ ಸಂಭ್ರಮದಲ್ಲಿ ಕುಟುಂಬ ಇತ್ತು. ಮಾವನನ್ನು ಕರೆತರಲು ಬಾಗ್ದೋಗ್ರಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಡಂಪರ್ ವಾಹನಕ್ಕೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ದುರಂತವನ್ನು ಕಂಡವರು ತಕ್ಷಣವೇ ಕಾರಿನಲ್ಲಿ ಸಿಲುಕಿದ್ದ ಗಾಯಾಳು ಮಕ್ಕಳನ್ನು ಹೊರತೆಗೆದು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ.
ದುರಂತದಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಸ್ಕಾರ್ಪಿಯೋ ಚಾಲಕ ಸಾವನ್ನಪ್ಪಿದ್ದಾನೆ. 6 ಮಂದಿ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ; ಮಂಗಳೂರು: ಮೀನು ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ; ₹10 ಕೋಟಿ ಮೌಲ್ಯದ ಮತ್ಸ್ಯೋತ್ಪನ್ನ ಬೆಂಕಿಗಾಹುತಿ - FIRE AT FISH FACTORY