ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ ಸಿಲುಕಿ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ದೆಹಲಿಯ ತಿಹಾರ್ ಜೈಲಿನಲ್ಲಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಜೈಲಿನಿಂದಲೇ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, ಶೀಘ್ರದಲ್ಲೇ ಹೊರಗಡೆ ಭೇಟಿಯಾಗುವುದಾಗಿ ತಿಳಿಸಿದ್ದಾರೆ.
ಪತ್ರದ ವಿವರ: "ಸ್ವಾತಂತ್ರ್ಯ ಸಮಯದಲ್ಲಿ ಎಲ್ಲರೂ ಹೋರಾಡಿದಂತೆಯೇ ನಾವು ಉತ್ತಮ ಶಿಕ್ಷಣ ಮತ್ತು ಶಾಲೆಗಳಿಗಾಗಿ ಹೋರಾಡುತ್ತಿದ್ದೇವೆ. ಮುಂದೊಂದು ದಿನ ಪ್ರತಿ ಮಗುವಿಗೆ ಸರಿಯಾದ ಮತ್ತು ಉತ್ತಮ ಶಿಕ್ಷಣ ಸಿಗುತ್ತದೆ. ಬ್ರಿಟಿಷರು ತಮ್ಮ ಶಕ್ತಿಯ ಬಗ್ಗೆ ಬಹಳ ಹೆಮ್ಮೆಪಡುತ್ತಿದ್ದರು. ಸುಳ್ಳು ಆರೋಪ ಹೊರಿಸಿ ಜೈಲಿಗೆ ಹಾಕುತ್ತಿದ್ದರು. ಗಾಂಧಿಯನ್ನು ಹಲವು ವರ್ಷಗಳ ಕಾಲ ಜೈಲಿನಲ್ಲಿಟ್ಟರು. ನೆಲ್ಸನ್ ಮಂಡೇಲಾ ಅವರನ್ನೂ ಕೂಡ ಜೈಲಿನಲ್ಲಿಟ್ಟರು. ಈ ಜನರು ನನ್ನ ಸ್ಫೂರ್ತಿ ಮತ್ತು ನೀವೆಲ್ಲರೂ ನನ್ನ ಶಕ್ತಿ.''
"ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿಯಲ್ಲಿ ಶಿಕ್ಷಣ ಕ್ರಾಂತಿ ನಡೆದಿರುವುದು ಸಂತಸ ತಂದಿದೆ. ಈಗ ಪಂಜಾಬ್ ಶಿಕ್ಷಣ ಕ್ರಾಂತಿಯ ಸುದ್ದಿ ಓದಿ ಸಮಾಧಾನವಾಗುತ್ತಿದೆ. ಜೈಲಿನಲ್ಲಿದ್ದ ನಂತರ ನಿಮ್ಮ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಿದೆ. ನನ್ನ ಹೆಂಡತಿ ಹಾಗೂ ನೀವು ತುಂಬಾ ಕಾಳಜಿ ವಹಿಸಿದ್ದೀರಿ. ಸೀಮಾ ನಿಮ್ಮೆಲ್ಲರ ಬಗ್ಗೆ ಮಾತನಾಡುತ್ತಾ ಭಾವುಕರಾಗುತ್ತಾರೆ." ಎಂದು ಬರೆದಿದ್ದಾರೆ.
ದೆಹಲಿ ಮದ್ಯ ನೀತಿ ಹಗರಣದಲ್ಲಿ ಸಿಸೋಡಿಯಾ ವಿರುದ್ಧ ಸಿಬಿಐ 2022ರ ಆಗಸ್ಟ್‌ನಲ್ಲಿ ಮೊದಲ ಎಫ್‌ಐಆರ್ ದಾಖಲಿಸಿತು. 2023ರ ಫೆಬ್ರವರಿಯಲ್ಲಿ ಬಂಧಿಸಲಾಯಿತು. ಅಂದಿನಿಂದ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಜಾಮೀನು ಕೋರಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಜಾಮೀನು ಸಿಕ್ಕಿಲ್ಲ. ಮಾರ್ಚ್ 21ರಂದು ಇದೇ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದ್ದು, ಅವರು ಕೂಡಾ ತಿಹಾರ್ ಜೈಲಿನಲ್ಲಿದ್ದಾರೆ.