ಇಂಫಾಲ(ಮಣಿಪುರ): ಮಣಿಪುರದ ಉಖ್ರುಲ್ ಪಟ್ಟಣದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಗುಂಪೊಂದು ಪೊಲೀಸ್ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ದೋಚಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
‘ಸ್ವಚ್ಛತಾ ಅಭಿಯಾನ’ದ ಅಂಗವಾಗಿ ಪಟ್ಟಣದ ವಿವಾದಿತ ಜಮೀನನ್ನು ಸ್ವಚ್ಛಗೊಳಿಸುವ ವಿಚಾರವಾಗಿ ಬುಧವಾರ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟು 20 ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದ ವೇಳೆ ಪೊಲೀಸ್ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ದೋಚಲಾಗಿದೆ.
ಲೂಟಿ ಮಾಡಿ ಪರಾರಿ: ನಾಗಾ ಸಮುದಾಯದ ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಉಖ್ರುಲ್ ಪಟ್ಟಣದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ, ಯುವಕರಿದ್ದ ಗುಂಪು ವಿನೋ ಬಜಾರ್‌ನಲ್ಲಿರುವ ಪೊಲೀಸ್ ಠಾಣೆಗೆ ನುಗ್ಗಿತು. ಅಲ್ಲಿದ್ದ ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಲೂಟಿಯಾದ ಶಸ್ತ್ರಾಸ್ತ್ರಗಳು ಯಾವುವು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದಾಗ್ಯೂ, ಲೂಟಿಯಾದ ಶಸ್ತ್ರಾಸ್ತ್ರಗಳಲ್ಲಿ AK-47 ಮತ್ತು INSAS ರೈಫಲ್‌ಗಳು ಸೇರಿವೆ ಎಂದು ಮೂಲಗಳು ಹೇಳಿವೆ.
ನಾಗಾದಿಂದ ಮೊದಲ ಲೂಟಿ: ಕುಕಿ ಮತ್ತು ಮೈಥೇಯಿ ಜನಾಂಗೀಯ ಕಲಹದ ವೇಳೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಂದ ಶಸ್ತ್ರಾಸ್ತ್ರಗಳ ಲೂಟಿ ಮಾಡಲಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ನಾಗಾ ಸಮುದಾಯದ ಘರ್ಷಣೆಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲಾಗಿದೆ. ವಿಶೇಷವೆಂದರೆ, ಉಖ್ರುಲ್ ಪೊಲೀಸ್ ಠಾಣೆಯು ಅಸ್ಸಾಂ ರೈಫಲ್ಸ್ ಶಿಬಿರದಿಂದ ಕೆಲವೇ ಮೀಟರ್ ದೂರದಲ್ಲಿದೆ ಎಂದು ಅಧಿಕಾರಿ ಹೇಳಿದರು.
ಘಟನೆಯ ಬಳಿಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಲ್.ಕೈಲುನ್ ಅವರು ಎಚ್ಚರಿಕೆ ರವಾನಿಸಿದ್ದಾರೆ. ಎಲ್ಲಾ ಜಿಲ್ಲಾ ಎಸ್ಪಿಗಳು ಮತ್ತು ಇತರ ಅಧಿಕಾರಿಗಳಿಗೆ ಪೊಲೀಸ್ ಠಾಣೆಗಳ ಮೇಲೆ ನಿಗಾ ಇಡಲು ಸೂಚಿಸಿದ್ದಾರೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳಿಗೆ ಭದ್ರತೆ ನೀಡಲು ತಾಕೀತು ಮಾಡಿದ್ದಾರೆ.
ರಾಜ್ಯದಲ್ಲಿ ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವೆ 2023ರ ಮೇ ತಿಂಗಳಿನಿಂದ ಜನಾಂಗೀಯ ಸಂಘರ್ಷಗಳು ನಡೆಯುತ್ತಿವೆ. ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.
ಇದನ್ನೂ ಓದಿ: ರಾಧಾ-ಕೃಷ್ಣರ ಮೂರ್ತಿ ಕದ್ದ ಕಳ್ಳನಿಗೆ ಸಂಕಷ್ಟ: ದೇಗುಲದೆದುರು ವಿಗ್ರಹ ತಂದಿಟ್ಟ - Radha Krishna Idol Theft Case