ಇಂಫಾಲ್(ಮಣಿಪುರ): ಅಸ್ಸಾಂ ರೈಫಲ್ಸ್ನ ಯೋಧನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ನಂತರ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಗುಂಡಿನ ದಾಳಿಯಲ್ಲಿ ಆರು ಮಂದಿ ಯೋಧರು ಗಾಯಗೊಂಡಿದ್ದಾರೆ. ದಕ್ಷಿಣ ಮಣಿಪುರದಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ-ಮ್ಯಾನ್ಮಾರ್ ಗಡಿಗೆ ಸಮೀಪದಲ್ಲಿ ನಿಯೋಜಿಸಲಾಗಿರುವ ಅಸ್ಸಾಂ ರೈಫಲ್ಸ್ ಬೆಟಾಲಿಯನ್ನಲ್ಲಿ ಈ ಗುಂಡಿನ ದಾಳಿ ನಡೆದಿದೆ ಎಂದು ಇನ್ಸ್ಪೆಕ್ಟೊರೇಟ್ ಜನರಲ್ ಅಸ್ಸಾಂ ರೈಫಲ್ಸ್ (ಐಜಿಎಆರ್) ಕಚೇರಿಯು ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಐಜಿಎಆರ್ ನೀಡಿದ ಮಾಹಿತಿಯ ಪ್ರಕಾರ, ಗಾಯಗೊಂಡ ಯಾವುದೇ ಸೈನಿಕರು ಮಣಿಪುರದವರಾಗಿಲ್ಲ ಮತ್ತು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚುರಾಚಂದ್ ಪುರದ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಯೋಧರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
"ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದ ಹಿನ್ನೆಲೆಯಲ್ಲಿ ಯಾವುದೇ ಸಂಭಾವ್ಯ ವದಂತಿಗಳನ್ನು ನಿಯಂತ್ರಿಸಲು ಮತ್ತು ಯಾವುದೇ ಊಹಾಪೋಹಗಳನ್ನು ತಪ್ಪಿಸಲು ಘಟನೆಯ ವಿವರಗಳನ್ನು ಪಾರದರ್ಶಕವಾಗಿ ಹಂಚಿಕೊಳ್ಳುವುದು ಮುಖ್ಯ" ಎಂದು ಐಜಿಎಆರ್ ಅಧಿಕೃತ ಹೇಳಿಕೆ ತಿಳಿಸಿದೆ. "ಈ ದುರದೃಷ್ಟಕರ ಘಟನೆಯನ್ನು ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷದೊಂದಿಗೆ ತಳಕು ಹಾಕುವ ಅಗತ್ಯವಿಲ್ಲ. ಗಾಯಗೊಂಡವರಲ್ಲಿ ಯಾರೂ ಮಣಿಪುರದವರಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಘಟನೆಯ ಬಗ್ಗೆ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಕೇಂದ್ರ ಅರೆಸೈನಿಕ ಪಡೆ ಅಸ್ಸಾಂ ರೈಫಲ್ಸ್ ತಿಳಿಸಿದೆ.
"ಎಲ್ಲಾ ಅಸ್ಸಾಂ ರೈಫಲ್ಸ್ ಬೆಟಾಲಿಯನ್ಗಳಲ್ಲಿ ಮಣಿಪುರದ ವಿವಿಧ ಸಮುದಾಯಗಳಿಗೆ ಸೇರಿದ ಯೋಧರಿದ್ದು, ಮಿಶ್ರ ವರ್ಗ ಸಂಯೋಜನೆಯನ್ನು ಹೊಂದಿವೆ. ಮಣಿಪುರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಮಾಜದ ಧ್ರುವೀಕರಣದ ಹೊರತಾಗಿಯೂ ಎಲ್ಲಾ ಸಿಬ್ಬಂದಿ ಒಟ್ಟಿಗೆ ವಾಸಿಸುತ್ತಿದ್ದಾರೆ ಮತ್ತು ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ಅದು ಹೇಳಿದೆ. ಮಣಿಪುರವು ಮೇ 2023 ರಿಂದ ಮೈಟಿ ಮತ್ತು ಕುಕಿ-ಜೋ ಬುಡಕಟ್ಟು ಸಮುದಾಯಗಳ ನಡುವೆ ಜನಾಂಗೀಯ ಕಲಹಕ್ಕೆ ಸಾಕ್ಷಿಯಾಗಿದೆ.
ಮುಂದುವರಿದ ಶಾಂತಿ ಮಾತುಕತೆ: ಇಬ್ಬರು ಹಿರಿಯ ಗುಪ್ತಚರ ಬ್ಯೂರೋ ಅಧಿಕಾರಿಗಳು ಮತ್ತು ಸಂವಾದಕರನ್ನು ಒಳಗೊಂಡ ಗೃಹ ಸಚಿವಾಲಯದ ತಂಡವು ಸೋಮವಾರ ರಾತ್ರಿ ಮತ್ತು ಮಂಗಳವಾರ ಮೈಟಿ ಕಾರ್ಯಕರ್ತರ ಗುಂಪಾದ ಅರಂಬೈ ತೆಂಗೋಲ್ ಸದಸ್ಯರೊಂದಿಗೆ ಎರಡು ಸಭೆಗಳನ್ನು ನಡೆಸಿದೆ. ಅರಂಬೈ ತೆಂಗೋಲ್ ಬುಧವಾರ ಕಾಂಗ್ಲಾ ಕೋಟೆಯಲ್ಲಿ ಜನಾಂಗೀಯ ಗುಂಪಿನ ಎಲ್ಲಾ ಶಾಸಕರ ಸಭೆಯನ್ನು ಕರೆದಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ: '...ಆ ಕ್ಷಣ, ಸಾಕ್ಷಾತ್ ಹನುಮನೇ ಅವತರಿಸಿದ ಭಾವ'!