ರಾಂಚಿ(ಜಾರ್ಖಂಡ್): ದುರುಳನೊಬ್ಬ ತನ್ನೊಂದಿಗೆ ಲಿವ್-ಇನ್‌ನಲ್ಲಿದ್ದ ಯುವತಿಯನ್ನು ಅಮಾನವೀಯವಾಗಿ ಹತ್ಯೆಗೈದ ಘಟನೆ ಜಾರ್ಖಂಡ್‌ನ ಕುಂತಿ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
25 ವರ್ಷದ ನರೇಶ್ ಭೆಂಗ್ರಾ ಕೊಲೆ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಈತ ತಮಿಳುನಾಡಿನ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕೋಳಿ ಮಾಂಸ ಕತ್ತರಿಸುವುದರಲ್ಲಿ ನಿಪುಣನಾಗಿದ್ದನಂತೆ.
ನಾಯಿಯಿಂದ ಪ್ರಕರಣ ಬೆಳಕಿಗೆ: ನವೆಂಬರ್ 24ರಂದು ಜರಿಯಾಗಢ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ದಾಗ್ ಗ್ರಾಮದ ಸಮೀಪ ಬೀದಿ ನಾಯಿಯೊಂದು ಮಾನವ ದೇಹದ ಭಾಗವನ್ನು ಕಚ್ಚಿಕೊಂಡು ಓಡಾಡುತ್ತಿತ್ತು. ಇದರಿಂದಾಗಿ ಯುವತಿಯ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ತಮಿಳುನಾಡಿನಲ್ಲಿ ಲಿವ್-ಇನ್ ಸಂಬಂಧ: ಕಳೆದೆರಡು ವರ್ಷಗಳಿಂದ ತಮಿಳುನಾಡಿನಲ್ಲಿ ತಾನು ನೆಲೆಸಿದ್ದ ಜಿಲ್ಲೆಯ 24 ವರ್ಷದ ಯುವತಿಯೊಂದಿಗೆ ಆರೋಪಿ ಭೇಂಗ್ರಾ, ಲಿವ್-ಇನ್ ಸಂಬಂಧದಲ್ಲಿದ್ದ. ಕೊಲೆಗೂ ಸ್ವಲ್ಪ ದಿನಗಳ ಹಿಂದೆ ಆರೋಪಿ ಜಾರ್ಖಂಡ್‌ಗೆ ತೆರಳಿದ್ದಾನೆ. ಅಲ್ಲಿ ತನ್ನ ಲಿವ್-ಇನ್ ಪಾರ್ಟ್ನರ್ಗೆ ಹೇಳದೇ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಬಳಿಕ ತನ್ನ ಹೆಂಡತಿಯನ್ನು ಅಲ್ಲೇ ಬಿಟ್ಟು ಮತ್ತೆ ತಮಿಳುನಾಡಿಗೆ ಹಿಂದಿರುಗಿದ್ದ.
ಇತ್ತ ಲಿವ್-ಇನ್‌ನಲ್ಲಿದ್ದ ಯುವತಿಯು ಆರೋಪಿಯ ಬಳಿ, ನಾವು ಕುಂತಿಗೆ ತೆರಳೋಣ ಎಂದು ಒತ್ತಾಯ ಮಾಡುತ್ತಿದ್ದಳು. ಹೀಗಾಗಿ ಅಲ್ಲಿಂದ ಹೊರಟ ಜೋಡಿ, ರಾಂಚಿ ತಲುಪಿ ರೈಲು ಮುಖಾಂತರ ಕುಂತಿ ತಲುಪುತ್ತಾರೆ. ಅಲ್ಲಿಂದ ಯುವತಿಯನ್ನು ರಿಕ್ಷಾದಲ್ಲಿ ತನ್ನ ಹಳ್ಳಿಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಈಕೆಯನ್ನು ಮನೆಗೆ ಸೇರಿಸಿಕೊಳ್ಳಲು ಪತ್ನಿ ನಿರಾಕರಿಸಿದ್ದಾಳೆ. ಹೀಗಾಗಿ, ಆಕೆಯನ್ನು ಮನೆಗೆ ಕರೆಯದೇ ರಿಕ್ಷಾ ಸಮೀಪವೇ ಕಾಯುವಂತೆ ಸೂಚಿಸಿದ್ದಾನೆ.
ಮರಳುವಾಗ ಚೂಪಾದ ಆಯುಧದೊಂದಿಗೆ ಬಂದ ಆರೋಪಿ, ಸಮೀಪದ ಕಾಡಿಗೆ ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯ ದುಪ್ಪಟ್ಟದಿಂದಲೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ದೇಹವನ್ನು 40ರಿಂದ 50 ತುಂಡುಗಳಾಗಿ ಕತ್ತರಿಸಿ ಕಾಡಿನ ಮೂಲೆಮೂಲೆಗೆ ಎಸೆದು, ತನ್ನ ಪತ್ನಿ ಜೊತೆ ಸಂಸಾರ ಮಾಡಲು ತೆರಳಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಡಿನಲ್ಲಿ ತನಿಖೆಯ ವೇಳೆ ಮೃತದೇಹದ ಅಂಗಾಂಗಗಳು ಪತ್ತೆಯಾಗಿವೆ. ಕೊಲೆಯಾದ ಯುವತಿಯ ಆಧಾರ್ ಕಾರ್ಡ್ ಸೇರಿದಂತೆ ಇತರೆ ಸಾಮಗ್ರಿಗಳಿದ್ದ ಬ್ಯಾಗ್ ಕೂಡ ದೊರೆತಿದೆ. ಮಹಿಳೆಯ ತಾಯಿಯನ್ನು ಸ್ಥಳಕ್ಕೆ ಕರೆಸಿದಾಗ ಅವರು ಆಕೆ ತಮ್ಮ ಮಗಳು ಮತ್ತು ಸಿಕ್ಕ ವಸ್ತುಗಳು ಆಕೆಯವು ಎಂದು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾ ಮಹಿಳಾ ಪೈಲಟ್ ಆತ್ಮಹತ್ಯೆಯಲ್ಲ, ಕೊಲೆ: ಕುಟುಂಬಸ್ಥರ ಅನುಮಾನ