ಬರ್ಧಮಾನ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವನ್ನು ತಪ್ಪಿಸಲು ಹೋಗಿ ಹಠಾತ್ತನೆ ನಿಂತಿದೆ. ಪರಿಣಾಮ ಅವರ ಹಣೆಗೆ ಗಾಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಲಕನ ಪಕ್ಕ ಮುಂಭಾಗದಲ್ಲಿ ಕುಳಿತಿದ್ದ ಸಿಎಂ ಬ್ಯಾನರ್ಜಿ ಅವರ ತಲೆಯು ವಿಂಡ್‌ಸ್ಕ್ರೀನ್‌ಗೆ ಬಡಿದ ಪರಿಣಾಮ ಅವರಿಗೆ ಗಾಯವಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಸಿಎಂ ಅವರನ್ನು ಮತ್ತೆ ಕೋಲ್ಕತ್ತಾಗೆ ಕರೆದೊಯ್ಯಲಾಗಿದೆ. ಮೂಲಗಳ ಪ್ರಕಾರ, ಚಾಲಕ ಇದ್ದಕ್ಕಿದ್ದಂತೆ ಕಾರಿನ ಬ್ರೇಕ್ ಹಾಕಿದ್ದಕ್ಕೆ ಈ ಅವಘಡ ಸಂಭವಿಸಿದೆ.
ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿಯವರು ರಾಜ್ಯ ಸರ್ಕಾರದ ಹೆಲಿಕಾಪ್ಟರ್ ಮೂಲಕ ಬುರ್ದ್ವಾನ್ ತಲುಪಿದ್ದರು. ಆದರೆ ಹಿಂದಿರುಗುವಾಗ ಪ್ರತಿಕೂಲ ಹವಾಮಾನದ ಕಾರಣ ಚಾಪರ್ ಅನ್ನು ಟೇಕ್ ಆಫ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಮಮತಾ ಬ್ಯಾನರ್ಜಿ ಅವರು ತಮ್ಮ ಸ್ವಂತ ವಾಹನದಲ್ಲಿ ರಸ್ತೆ ಮೂಲಕ ಕೋಲ್ಕತ್ತಾಗೆ ತೆರಳಲು ನಿರ್ಧರಿಸಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಉತ್ತರ ಬಂಗಾಳದ ಸಾಲುಗರದಲ್ಲಿರುವ ರಕ್ಷಣಾ ಪಡೆಗಳ ವಾಯುನೆಲೆಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಮಾಡಿದಾಗ ಮುಖ್ಯಮಂತ್ರಿ ಅವರ ಕಾಲಿಗೆ ಗಾಯವಾಗಿತ್ತು.
ಇಂದು ಮುಂಜಾನೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಟಿಎಂಸಿ ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಘೋಷಿಸಿದ್ದರು. ಈ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಳ್ಳುವ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ನೇತಾಜಿ ಜನ್ಮದಿನಕ್ಕೆ ರಾಷ್ಟ್ರೀಯ ರಜೆ ನೀಡಿ: ಕೇಂದ್ರ ಸರ್ಕಾರಕ್ಕೆ ಮಮತಾ ಬ್ಯಾನರ್ಜಿ ಆಗ್ರಹ