ನವದೆಹಲಿ: ಈ ಬಾರಿ ಬಿಜೆಪಿ ಅಬ್ ಕಿ ಬಾರ್ ಚಾರ್ ಸೌ ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ವಿಚಾರ ಇಂದು ರಾಜ್ಯಸಭೆಯಲ್ಲಿ ಕುತೂಹಲಕಾರಿ ಚರ್ಚೆಗೆ ಕಾರಣವಾಯಿತು. ಬಿಜೆಪಿಯ ಘೋಷಣೆ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಅವರ ಈ ಮಾತನ್ನು ಕೇಳಿ ಸದನದಲ್ಲಿ ಹಾಜರಿದ್ದ ಪ್ರಧಾನಿ ನರೇಂದ್ರ ಮೋದಿ ಮೊಗದಲ್ಲಿ ನಗು ತರಿಸಿತು. ಈ ದೃಶ್ಯಗಳು ಈಗ ಸದ್ದು ಮಾಡುತ್ತಿದೆ.
ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದಾಗ ಈ ವಿಚಾರ ಪ್ರಸ್ತಾಪಿಸಿದ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಖರ್ಗೆ, "ಪ್ರಸ್ತುತ ಮೋದಿ ಸರ್ಕಾರ 330-334 ಸ್ಥಾನಗಳೊಂದಿಗೆ ಅಧಿಕಾರದಲ್ಲಿದೆ. ಈಗ ನಾವೆಲ್ಲ ಚುನಾವಣೆ ಹೊಸ್ತಿಲಿನಲ್ಲಿದ್ದು, ಬಿಜೆಪಿ ಈ ಬಾರಿ ಅಬ್ ಕಿ ಬಾರ್ ಚಾರ್ಸೌ ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸಲು ಹೊರಟಿದೆ. ಇಲ್ಲಿದ್ದವರೆಲ್ಲ ಮೊದಲು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲಿ, ಚಪ್ಪಾಳೆ ತಟ್ಟಿ ಪ್ರಧಾನಿ ಮೋದಿಯವರ ಕೃಪಾಶೀರ್ವಾದದಿಂದ ಇವರೆಲ್ಲ ಇಲ್ಲಿದ್ದಾರೆ ಎಂದರು. ಖರ್ಗೆ ಅವರ ಈ ಮಾತು ಸದನದಲ್ಲಿದ್ದ ಮೋದಿ ಅವರ ನಗುವಿಗೆ ಕಾರಣವಾಯ್ತು.
ಈ ಬಾರಿ ಮೋದಿ 100 ಸ್ಥಾನಗಳನ್ನೂ ಗೆಲ್ಲುವುದಿಲ್ಲ; ಖರ್ಗೆ:- ಈ ನಡುವೆ, ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಖರ್ಗೆ ಅವರ ಹೇಳಿಕೆಯನ್ನು ಶ್ಲಾಘಿಸಿದರು. ಖರ್ಗೆಯವರು ಸತ್ಯವನ್ನೇ ಮಾತನಾಡಿದ್ದಾರೆ ಎಂದರು. ಆದರೆ, ಅಚ್ಚರಿ ಎಂಬಂತೆ ತಮ್ಮ ಮೊದಲಿನ ಹೇಳಿಕೆಗೆ ವ್ಯತಿರಿಕ್ತವಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಸಹ ಮೀರುವುದಿಲ್ಲ ಎಂದು ಪ್ರತಿಪಾದಿಸಿದರು. ಏಕೆಂದರೆ ಇಂಡಿಯಾ ಮೈತ್ರಿಕೂಟ ಈ ಬಾರಿ ಬಲಿಷ್ಠವಾಗಿದೆ ಎಂದು ಹೇಳಿದರು.
ಇಂಡಿಯಾ ಮೈತ್ರಿಕೂಟ ಇದೆಯೋ ಇಲ್ಲವೋ ನಮಗೆ ಗೊತ್ತಿಲ್ಲ- ಪಿಯೂಷ್ ಗೋಯಲ್: ಖರ್ಗೆ ಅವರು ಈ ಮಾತು ಹೇಳುತ್ತಿದ್ದ ಮತ್ತೆ ಎದ್ದು ನಿಂತ ಸಚಿವ ಪಿಯೂಷ್ ಗೋಯಲ್. "ದಿನನಿತ್ಯ ಇಂಡಿಯಾ ಮೈತ್ರಿಕೂಟದ ಸದಸ್ಯರು ಒಬ್ಬೊಬ್ಬರಾಗಿಯೇ ಮೈತ್ರಿ ತೊರೆಯುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟ ಇದೆಯೋ ಇಲ್ಲವೋ ನಮಗೆ ಗೊತ್ತಿಲ್ಲ" ಎಂದರು. ಈ ನಡುವೆ ಬಿಜೆಪಿ ಪಕ್ಷದ ಅಧಿಕೃತ ಎಕ್ಸ್( ಟ್ವಿಟರ್) ಹ್ಯಾಂಡಲ್ ಮಲ್ಲಿಕಾರ್ಜುನ್ ಖರ್ಗೆ ಅವರು ಸದನದಲ್ಲಿ ಮಾತನಾಡಿದ ವಿಡಿಯೋವನ್ನು ಹಂಚಿಕೊಂಡಿದೆ. ಪ್ರಧಾನಿ ಮೋದಿ ಅವರಿಗೆ ಹೊಸ ದ್ವೇಷಿಗಳು ಬೇಕು, ಹಳೆಯ ದ್ವೇಷಿಗಳು ಈಗ ನನ್ನ ಅಭಿಮಾನಿಗಳಾಗಿದ್ದಾರೆ ಎಂದು ಅಡಿ ಬರಹ ಕೂಡಾ ಹಾಕಿದೆ.
ಮತ್ತೊಂದು ಕಡೆ ಕೇಂದ್ರ ಸಚಿವೆ ಸ್ಮೃತಿ ಇರಾನಿ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು, "ವಿರೋಧವೂ ಒಪ್ಪಿಕೊಂಡಿದೆ, ಮೂರನೇ ಬಾರಿಗೆ ಬಿಜೆಪಿ 400 ರ ಗಡಿ ದಾಟಲಿದೆ!" ಎಂದು ಬರೆದುಕೊಂಡಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ NDA 353 ಸ್ಥಾನಗಳನ್ನು ಗೆದ್ದುಕೊಂಡಿತು, UPA 91 ಸ್ಥಾನಗಳನ್ನಷ್ಟೇ ಪಡೆಯಲು ಸಾಧ್ಯವಾಗಿತ್ತು. ಇತರರು 98 ಸ್ಥಾನಗಳಲ್ಲಿ ಆಯ್ಕೆ ಆಗಿದ್ದರು. ಏಪ್ರಿಲ್ 11 ಮತ್ತು ಮೇ 19 ರ ನಡುವೆ ಏಳು ಹಂತಗಳಲ್ಲಿ ದೇಶಾದ್ಯಂತ ಮತದಾನ ನಡೆದಿತ್ತು. 90 ಕೋಟಿ ಮತದಾರರಲಿ ಶೇ 67 ರಷ್ಟು ವೋಟರ್ಸ್ ತಮ್ಮ ಹಕ್ಕು ಚಲಾಯಿಸಿದ್ದರು. 2024 ರ ಏಪ್ರಿಲ್ನಲ್ಲಿ ಈ ಬಾರಿಯ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಇದನ್ನು ಓದಿ: ದೇಶ ಒಡೆಯುವ ಹೇಳಿಕೆ ಸಹಿಸಲ್ಲ ಎಂದ ಖರ್ಗೆ.. ವಿಷಯ ನೈತಿಕ ಸಮಿತಿಗೆ ಒಪ್ಪಿಸಬೇಕೆಂದು ಬಿಜೆಪಿ ಒತ್ತಾಯ