ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಪಿಯೂಷ್ ಗೋಯಲ್ ಮತ್ತು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ತಮ್ಮ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕಲ್ಯಾಣ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಕೂಡ (ಶಿವಸೇನೆ) ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಿಎಂ ಶಿಂಧೆ ನೇತೃತ್ವದ ಶಿವಸೇನೆ ಆರು ಸ್ಥಾನಗಳಲ್ಲಿ ಸದ್ಯ ಮುನ್ನಡೆ ಸಾಧಿಸಿದೆ. ರಾಜ್ಯದ 48 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದ್ದು, ಮೊದಲು ಅಂಚೆ ಮತಗಳ ಎಣಿಕೆಯನ್ನು ಕೈಗೊಳ್ಳಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಗ್ಪುರದಿಂದ ಮೂರನೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಗಡ್ಕರಿ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕಾಸ್ ಠಾಕ್ರೆ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ. ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವ ಪಿಯೂಷ್ ಗೋಯಲ್ ಕೂಡ ಮುನ್ನಡೆ ಇದ್ದಾರೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಭೂಷಣ್ ಪಾಟೀಲ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು.
ಇನ್ನು ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುಪ್ರಿಯಾ ಸುಳೆ ತಮ್ಮ ಸೊಸೆ ಸುನೇತ್ರಾ ಪವಾರ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಕಲ್ಯಾಣ್ ಕ್ಷೇತ್ರದಿಂದ ಮೂರನೇ ಅವಧಿಗೆ ಸ್ಪರ್ಧಿಸಿರುವ ಶ್ರೀಕಾಂತ್ ಶಿಂಧೆ ಅವರು ತಮ್ಮ ಪ್ರತಿಸ್ಪರ್ಧಿಗಳಿಗಿಂತ 2,093 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಥಾಣೆ ಕ್ಷೇತ್ರದಲ್ಲಿ ಸಿಎಂ ಏಕನಾಥ್ ಶಿಂಧೆ ಅವರ ನಿಕಟವರ್ತಿ ನರೇಶ್ ಮ್ಹಾಸ್ಕೆ ಅವರು ತಮ್ಮ ಪ್ರತಿಸ್ಪರ್ಧಿಗಳಿಗಿಂತ 613 ಮತಗಳ ಮುನ್ನಡೆ ಸಾಧಿಸಿದ್ದಾರೆ. ಶಿವಸೇನಾ ಅಭ್ಯರ್ಥಿಗಳಾದ ರಾಹುಲ್ ಶೆವಾಲೆ (ಮುಂಬೈ ಸೌತ್ ಸೆಂಟ್ರಲ್), ಯಾಮಿನಿ ಜಾಧವ್ (ಮುಂಬೈ ಸೌತ್), ಶ್ರೀರಂಗ್ ಬರ್ನೆ (ಮಾವಲ್) ಮತ್ತು ಪ್ರತಾಪ್ರಾವ್ ಜಾಧವ್ (ಬುಲ್ಧಾನ) ಕೂಡ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಮುಂದಿದ್ದಾರೆ.