ಮುಂಬೈ : ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜಾತಿಯ ವನ್ಯಜೀವಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ನೀರುನಾಯಿ, ರಣಹದ್ದುಗಳು ಮತ್ತು ಕಾಡು ಎಮ್ಮೆಗಳ ಸಂತಾನೋತ್ಪತ್ತಿ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಅಪರೂಪದ ಪ್ರಭೇದಗಳ ರಕ್ಷಣೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ ಎಂದು ಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ 'ಏಕ್ ಪೇಡ್ ಮಾ ಕೆ ನಾಮ್' (ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನವನ್ನು ರಾಜ್ಯದ ಎಲ್ಲಾ ಮುನ್ಸಿಪಲ್ ಕಾರ್ಪೊರೇಷನ್ಗಳು, ಪುರಸಭೆಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಶಿಂಧೆ ನಿರ್ದೇಶನ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪೆಂಚ್ ಹುಲಿ ಮೀಸಲು ಪ್ರದೇಶದಲ್ಲಿ ನೀರುನಾಯಿಗಳು, ನಾಸಿಕ್ನಲ್ಲಿ ರಣಹದ್ದುಗಳು ಮತ್ತು ಗಡ್ ಚಿರೋಲಿಯಲ್ಲಿ ಕಾಡು ಎಮ್ಮೆಗಳ ಸಂತಾನೋತ್ಪತ್ತಿ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಶಿಂಧೆ ಅನುಮೋದನೆ ನೀಡಿದರು. ಅಪರೂಪದ ವನ್ಯಜೀವಿ ಪ್ರಭೇದಗಳನ್ನು ಸಂರಕ್ಷಿಸುವಲ್ಲಿ ಈ ಕೇಂದ್ರಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ರೈತರ ಅಪಘಾತ ವಿಮಾ ಯೋಜನೆಯಾದ ಗೋಪಿನಾಥ್ ಮುಂಡೆ ಶೇತ್ಕರಿ ಅಪಘಾತ್ ವಿಮಾ ಯೋಜನೆಯನ್ನು ಹಾವು ಕಡಿತದಿಂದ ಸಾಯುವ ಕೃಷಿ ಕಾರ್ಮಿಕರಿಗೆ ವಿಸ್ತರಿಸಲು ಮತ್ತು ಹಾವು ಕಡಿತಕ್ಕೆ ಒಳಗಾದವರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುವಂತಾಗಲು 'ಕ್ಲಿನಿಕ್ ಆನ್ ವೀಲ್ಸ್' ಯೋಜನೆಯನ್ನು ಪ್ರಾರಂಭಿಸುವಂತೆ ಶಿಂಧೆ ನಿರ್ದೇಶಿಸಿದ್ದಾರೆ.
ಇದಲ್ಲದೆ, ಕಾಡು ಪ್ರಾಣಿಗಳ ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಅರಣ್ಯ ಕಾರ್ಮಿಕರಾಗಿ ನೇಮಿಸಿಕೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ ಎಂದು ಸಿಎಂಒ ಹೇಳಿಕೆ ತಿಳಿಸಿದೆ. ರಾಜ್ಯಾದ್ಯಂತ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ನೆಡುವ ಗುರಿ ಹೊಂದಲಾಗಿದ್ದು, ಅಪರೂಪದ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವತ್ತ ಗಮನ ಹರಿಸುವಂತೆ ಅರಣ್ಯ ಇಲಾಖೆಗೆ ಸಿಎಂ ಸೂಚನೆ ನೀಡಿದರು. ಸಾತಾರಾ ಜಿಲ್ಲೆಯ ಜವಾಲಿ ಅರಣ್ಯವು 500 ಅಪರೂಪದ ಸಸ್ಯ ಪ್ರಭೇದಗಳಿಗೆ ನೆಲೆಯಾಗಿರುವುದನ್ನು ಪ್ರಸ್ತಾಪಿಸಿದ ಸಿಎಂ ಈ ಪ್ರದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವಂತೆ ಇಲಾಖೆಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ : ಆಗಸ್ಟ್ 16ರಂದು ಡಿಎಂಕೆ ಸಭೆ: ಉದಯನಿಧಿ ಸ್ಟಾಲಿನ್ ಡಿಸಿಎಂ ನೇಮಕ ಬಗ್ಗೆ ಚರ್ಚೆ ಸಾಧ್ಯತೆ - Udhayanidhi Stalin