ಚೆನ್ನೈ(ತಮಿಳುನಾಡು): ತಮಿಳುನಾಡು ಸರ್ಕಾರಿ ಉದ್ಯೋಗಿಗಳಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ಕ್ರಮಕ್ಕೆ ಮದ್ರಾಸ್ ಹೈಕೋರ್ಟ್ ಇಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾ.ಎಸ್.ಎಂ.ಸುಬ್ರಮಣಿಯಂ ಮತ್ತು ನ್ಯಾ.ಎಂ.ಜ್ಯೋತಿರಮಣ್ ಅವರಿದ್ದ ವಿಭಾಗೀಯ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಅನೇಕ ದೂರುಗಳ ಹೊರತಾಗಿಯೂ ಭ್ರಷ್ಟಾಚಾರವಿಲ್ಲದೆ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯವನ್ನು ನೀಡಲಾಗುತ್ತಿಲ್ಲ ಎಂದು ತಿಳಿಸಿತು.
ರಾಜ್ಯ ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಕುರಿತು ದೂರುಗಳು ಕೇಳಿ ಬಂದಿರುವ ಕುರಿತು ಕೋರ್ಟ್ ಉಲ್ಲೇಖ ಮಾಡಿತು. ಅಲ್ಲದೇ, ಭ್ರಷ್ಟಚಾರದ ವಿರುದ್ಧ ಸರ್ಕಾರ ತೆಗೆದುಕೊಂಡ ಕ್ರಮಗಳು ಕುರಿತು ಜನವರಿ 6ರಂದು ಪೀಠದ ಮುಂದೆ ತಮಿಳುನಾಡು ಗೃಹ ಕಾರ್ಯದರ್ಶಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದೆ.
ಬಡವರು ತಮ್ಮ ಪಟ್ಟಾ ಸೇರಿದಂತೆ ಸ್ಥಳೀಯ ಹಾಗೂ ಅಗತ್ಯ ಪ್ರಮಾಣ ಪತ್ರಗಳನ್ನು ಪಡೆಯಲು ಸಾವಿರಾರು ರೂಪಾಯಿ ಲಂಚ ನೀಡಬೇಕಿದೆ ಎಂಬುದು ನೋವಿನ ಸಂಗತಿ. ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ವೇತನ ಮತ್ತು ಭತ್ಯೆ ಪಡೆಯುತ್ತಿರಬೇಕಾದರೆ, ಬಡವರು ಯಾಕೆ ಸಂಕಷ್ಟಕ್ಕೆ ಒಳಗಾಗಬೇಕು ಎಂದು ಕೋರ್ಟ್ ಪ್ರಶ್ನಿಸಿದೆ.
ಇನ್ನು, ಪೊಲೀಸ್ ಸಿಬ್ಬಂದಿಯ ಕ್ರಮಗಳನ್ನು ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುತ್ತಿದೆಯೇ ಮತ್ತು ನಿಯಂತ್ರಿಸುತ್ತಿದೆಯೇ?. ಕರ್ತವ್ಯಲೋಪ ಮತ್ತು ಅಧಿಕಾರ ದುರುಪಯೋಗಕ್ಕಾಗಿ ಪೊಲೀಸ್ ಮತ್ತು ಕಾರಾಗೃಹ ಇಲಾಖಾ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಕೋರ್ಟ್ ಸ್ಪಷ್ಟನೆ ಕೇಳಿತು. (ಐಎಎನ್ಎಸ್)
ಇದನ್ನೂ ಓದಿ: ಮಹಿಳೆಯರ ಸುರಕ್ಷತೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ; ಮಹಿಳಾ ಆದಾಲತ್ನಲ್ಲಿ ಕೇಜ್ರಿವಾಲ್ ಆರೋಪ