ದಿಂಡೋರಿ (ಮಧ್ಯಪ್ರದೇಶ): ವಿಮೆ ಮತ್ತು ಬ್ಯಾಂಕ್ ದಾಖಲೆಗಳಲ್ಲಿ ತನ್ನನ್ನು ನಾಮಿನಿಯನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಮಹಿಳಾ ಉಪವಿಭಾಗೀಯ ಅಧೀಕ್ಷಕಿಯಾಗಿದ್ದ ಅಧಿಕಾರಿ ಪತ್ನಿಯನ್ನೇ ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಚ್ಚರಿಯ ಸಂಗತಿ ಎಂದರೆ ಕೊಲೆ ಮಾಡಿದ ಬಳಿಕ ಏನು ಮಾಡಬೇಕು ಎಂದು ತೋಚದೇ 6 ಗಂಟೆ ಕಾಲ ಶವದ ಮುಂದೆಯೇ ಆತ ಕುಳಿತಿದ್ದನಂತೆ.
ದಿಂಡೋರಿ ಜಿಲ್ಲೆಯ ಶಹಪುರದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ ನಿಶಾ ನಾಪಿತ್ (51) ಕೊಲೆಯಾದ ಮಹಿಳಾ ಅಧಿಕಾರಿ. ಆಸ್ತಿ, ಬ್ಯಾಂಕ್ ಖಾತೆಗಳಿಗೆ ನಾಮಿನಿ ಮಾಡದ್ದಕ್ಕೆ ಗಂಡನಿಂದಲೇ ಕೊಲೆಯಾಗಿದ್ದಾರೆ. ಪೊಲೀಸರು 24 ಗಂಟೆ ಅವಧಿಯಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ.
ಪ್ರಕರಣದ ವಿವರ ಹೀಗಿದೆ: ಅಧಿಕಾರಿ ನಿಶಾ ನಾಪಿತ್ ಅವರು, ಆರೋಪಿ ಮನೀಶ್ ಶರ್ಮಾ ಎಂಬಾತನನ್ನು 2020 ರಲ್ಲಿ ವಿವಾಹವಾಗಿದ್ದರು. ಆಸ್ತಿ ಮಾರಾಟಗಾರನಾಗಿದ್ದ ಈತ, ಪತ್ನಿಯ ಜೊತೆಗೆ ಹಣ, ಆಸ್ತಿ ವಿಚಾರದಲ್ಲಿ ಕಿತ್ತಾಡುತ್ತಿದ್ದ ಎಂದು ತಿಳಿದು ಬಂದಿದೆ. ಇದೇ ನಿಶಾ ಅವರು ತಮ್ಮ ಸೇವಾ ವಿಮೆ, ಬ್ಯಾಂಕ್ ಖಾತೆಗಳಿಗೆ ನಾಮಿನಿಯಾಗಿ ಯಾರನ್ನೂ ಸೂಚಿಸಿರಲಿಲ್ಲ. ಇದು ಪತಿ ಮನೀಶ್ಗೆ ಕೋಪಕ್ಕೆ ಕಾರಣವಾಗಿತ್ತು.
ತನ್ನನ್ನು ನಾಮಿನಿಯನ್ನಾಗಿ ಮಾಡುವಂತೆ ಹಲವು ಬಾರಿ ಆತ ಕಿತ್ತಾಡಿಕೊಂಡಿದ್ದ. ಆದಾಗ್ಯೂ ನಿಶಾ ಅವರು ನಿರಾಕರಿಸಿದ್ದರು. ಇದರಿಂದ ಕೋಪಗೊಂಡಿದ್ದ ಪತಿ, ಭಾನುವಾರ ರಾತ್ರಿ ಆಕೆಯನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಯಾರಿಗೂ ಗೊತ್ತಾಗದ ಹಾಗೆ ಶವವನ್ನು ವಿಲೇವಾರಿ ಮಾಡಲು ಯತ್ನಿಸಿದ್ದಾನೆ.
6 ಗಂಟೆ ಶವದ ಮುಂದೆ ಕೂತಿದ್ದ ಕೊಲೆಗಡುಕ: ಸಿಟ್ಟಿನಲ್ಲಿ ಕೊಲೆ ಮಾಡಿದ ಬಳಿಕ ಶವವನ್ನು ಏನು ಮಾಡಬೇಕು ಎಂದು ತೋಚದೇ, ಅದರ ಮುಂದೆಯೇ 6 ಗಂಟೆಗಳ ಕಾಲ ಕಳೆದಿದ್ದಾನೆ. ಬಳಿಕ ಉಸಿರಾಟ ತೊಂದರೆ ಇದೆ ಬಿಂಬಿಸಿ ನಿಶಾ ಮೃತದೇಹವನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದಾನೆ. ವೈದ್ಯರು ಪರೀಕ್ಷಿಸಿದಾಗ ಆಕೆ ಮೃತಪಟ್ಟಿದ್ದು ಗೊತ್ತಾಗಿದೆ. ಅನುಮಾನ ಬಂದು ವೈದ್ಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಬಂದ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದಾನೆ. ಹತ್ಯೆ ಬಯಲಾಗಬಾರದು ಎಂದು ರಕ್ತದ ಕಲೆ ಅಂಟಿದ್ದ ಬಟ್ಟೆ, ದಿಂಬನ್ನು ವಾಷಿಂಗ್ ಮೆಷಿನ್‌ನಲ್ಲಿ ತೊಳೆದಿದ್ದ. ತನಿಖೆ ತಂಡ ಸ್ಥಳ ಪರಿಶೀಲನೆ ನಡೆಸಿ, ಸಿಕ್ಕ ಸುಳಿವುಗಳ ಆಧಾರದ ಮೇಲೆ ಶರ್ಮಾನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಕೊಲೆ, ವರದಕ್ಷಿಣೆ ಸಂಬಂಧಿತ ಕಿರುಕುಳ, ಸಾಕ್ಷ್ಯ ನಾಶ, ಮತ್ತಿತರ ಆರೋಪಗಳಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
24 ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ ತನಿಖಾ ತಂಡವನ್ನು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಮುಖೇಶ್ ಶ್ರೀವಾಸ್ತವ ಶ್ಲಾಘಿಸಿದ್ದಾರೆ. 20 ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದಾರೆ.
ಇದನ್ನೂ ಓದಿ: ಕೋಟಾದಲ್ಲಿ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ: ಈ ವರ್ಷದ ಎರಡನೇ ಪ್ರಕರಣ