ವಾಷಿಂಗ್ಟನ್: ಭಾರತದ ರಾಜಕೀಯದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಕಣ್ಮರೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಟೆಕ್ಸಾಸ್ನಲ್ಲಿ ಭಾರತೀಯ-ಅಮೆರಿಕ ಸಮುದಾಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಆರ್‌ಎಸ್‌ಎಸ್ ಅನ್ನು ಟೀಕಿಸಿದರು.
ಆರ್‌ಎಸ್‌ಎಸ್ ಭಾರತವನ್ನು ಒಂದು ಕಲ್ಪನೆ ಎಂದು ನಂಬಿದೆ. ಆದರೆ, ನಾವು ಭಾರತವನ್ನು ಬಹು ಕಲ್ಪನೆಯ ದೇಶ ಎಂದು ನಂಬಿದ್ದೇವೆ. ಅಮೆರಿಕದಂತೆ ನಾವೂ ಕೂಡಾ ಪ್ರತಿಯೊಬ್ಬರಿಗೂ ಭಾಗಿಯಾಗಲು ಅವಕಾಶ ನೀಡಬೇಕು. ಎಲ್ಲರೂ ಕನಸು ಕಾಣಲು ಬಿಡಬೇಕು. ಜಾತಿ, ಭಾಷೆ, ಧರ್ಮ ಸಂಪ್ರದಾಯ, ಇತಿಹಾಸದ ಹೊರತಾಗಿ ಎಲ್ಲರಿಗೂ ಅವರದೇ ಆದ ಜಾಗವಿರಬೇಕು ಎಂದರು.
ಭಾರತದ ಸಂವಿಧಾನದ ಮೇಲೆ ಪ್ರಧಾನಿ ದಾಳಿ ಮಾಡುತ್ತಿದ್ದಾರೆ. ಈ ವಿಚಾರವನ್ನು ಲಕ್ಷಾಂತರ ಜನರು ಅರ್ಥಮಾಡಿಕೊಂಡಾಗ ನಮ್ಮ ಹೋರಾಟಕ್ಕೆ ಬಲ ಬಂತು. ಅಮೆರಿಕದಲ್ಲಿ ಭಾಷೆ, ಧರ್ಮ, ಸಂಪ್ರದಾಯವನ್ನು ಗೌರವಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಂಗತಿಯನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ ಎಂದು ಹೇಳಿದರು.
Watch: Interaction with Indian Diaspora | Dallas, Texas, USA https://t.co/1CpDoOMlYT
— Rahul Gandhi (@RahulGandhi) September 9, 2024
ಭಾರತದ ರಾಜಕೀಯದಲ್ಲಿ ಪ್ರೀತಿ, ಗೌರವ ಮತ್ತು ಮಾನವೀಯತೆಯ ಮೌಲ್ಯವನ್ನು ತುಂಬುವುದು ನನ್ನ ಕೆಲಸ. ಒಂದು ಧರ್ಮ, ಒಂದು ಸಮುದಾಯ, ಒಂದು ಜಾತಿ, ಒಂದು ರಾಜ್ಯ ಅಥವಾ ಅವರು ಮಾತನಾಡುವ ಭಾಷೆ ಮುಖ್ಯವಾಗದೇ ಎಲ್ಲರನ್ನೂ ನಾವು ಪ್ರೀತಿಸಬೇಕಿದೆ. ದೇಶ ನಿರ್ಮಿಸುತ್ತಿರುವ ಎಲ್ಲರನ್ನೂ ನಾವು ಗೌರವಿಸಬೇಕಿದೆ ಎಂದು ತಿಳಿಸಿದರು.
'ಬಿಜೆಪಿಗೆ, ಪ್ರಧಾನಿಗೆ ಯಾರೂ ಹೆದರುವುದಿಲ್ಲ': ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಪರೋಕ್ಷವಾಗಿ ಮಾತನಾಡಿದ ರಾಹುಲ್, ಬಿಜೆಪಿ ನಮ್ಮ ಸಂಪ್ರದಾಯ, ನಮ್ಮ ಭಾಷೆ ಇತರೆ ವಿಷಯದ ಮೇಲೆ ದಾಳಿ ಮಾಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಸಂವಿಧಾನದ ಜೊತೆಗೆ ನಮ್ಮ ಧಾರ್ಮಿಕ ಸಂಪ್ರದಾಯದ ಮೇಲೂ ಯಾರೂ ದಾಳಿ ಮಾಡಲು ಸಾಧ್ಯವಿಲ್ಲ ಎಂಬುದು ಈಗ ಅವರಿಗೆ ಅರ್ಥವಾಗಿದೆ. ಇದನ್ನು ಚುನಾವಣಾ ಫಲಿತಾಂಶದ ಕೆಲವೇ ನಿಮಿಷದಲ್ಲಿ ಅರಿತರು. ಭಾರತದಲ್ಲಿ ಬಿಜೆಪಿಗೆ, ಪ್ರಧಾನಿಗೆ ಯಾರೂ ಹೆದರುತ್ತಿಲ್ಲ. ಪ್ರಜಾಪ್ರಭುತ್ವವನ್ನು ಅರಿತ ಜನರು, ನಮ್ಮ ಸಂವಿಧಾನದ ಮೇಲಿನ ದಾಳಿಯನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಸಂಪ್ರದಾಯ, ತಮ್ಮ ರಾಜ್ಯದ ಮೇಲಿನ ದಾಳಿಯನ್ನು ಒಪ್ಪುವುದಿಲ್ಲ ಎಂದು ಹೇಳಿದರು.
ಭಾರತಕ್ಕೆ ಅಮೆರಿಕ, ಅಮೆರಿಕಕ್ಕೆ ಭಾರತದ ಅಗತ್ಯವಿದೆ ಎಂದ ಗಾಂಧಿ, ವಿದೇಶದಲ್ಲಿ ನೆಲೆಸಿರುವ ಭಾರತೀಯರು ಎರಡು ದೇಶಗಳ ನಡುವಿನ ಸೇತುವೆಯಾಗಿದ್ದಾರೆ. ನನ್ನ ದೃಷ್ಟಿಯಲ್ಲಿ, ನೀವು ಸ್ವತಂತ್ರ್ಯವಾಗಿ ಎರಡು ದೇಶದ ನಡುವೆ ಪ್ರಯಾಣ ಮಾಡಬಹುದು. ನಿಮ್ಮ ಆಲೋಚನೆಯನ್ನು ಅಮೆರಿಕದಿಂದ ಭಾರತಕ್ಕೆ, ಭಾರತದಿಂದ ಅಮೆರಿಕಕ್ಕೆ ತರಬಹುದು. ಎರಡು ಒಕ್ಕೂಟಗಳ ನಡುವಿನ ಸಂಬಂಧ ಹಾಗೂ ಭವಿಷ್ಯದ ನಿರ್ಣಯದಲ್ಲಿ ನಿಮ್ಮ ಪಾತ್ರ ನಿರ್ಣಾಯಕವಾಗಿದೆ ಎಂದರು.
ಇದನ್ನೂ ಓದಿ: ಹರಿಯಾಣ ವಿಧಾನಸಭೆ ಚುನಾವಣೆ: ಕಾಂಗ್ರೆಸ್-ಆಪ್ ಮೈತ್ರಿ ಅಂತಿಮ? ಎಎಪಿಗೆ ಸಿಕ್ಕ ಸೀಟೆಷ್ಟು?