ಹೈದರಾಬಾದ್: 2024ರ ಸಾರ್ವತ್ರಿಕ ಲೋಕಸಭೆ ಚುನಾವಣೆಯ ಐದು ಹಂತಗಳು ಪೂರ್ಣಗೊಂಡಿದ್ದು, ಆರನೇ ಹಂತದ ಚುನಾವಣೆ ಶನಿವಾರ (ಮೇ 25) ನಡೆಯಲಿದೆ. ಈ ಹಂತದಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿ 58 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಒಟ್ಟು 889 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ.
ಬಿಹಾರ (8 ಸ್ಥಾನ), ಹರಿಯಾಣ (ಎಲ್ಲಾ 10 ಸ್ಥಾನ), ಜಮ್ಮು ಮತ್ತು ಕಾಶ್ಮೀರ (1 ಸ್ಥಾನ), ಜಾರ್ಖಂಡ್ (4 ಸ್ಥಾನ), ದೆಹಲಿ (ಎಲ್ಲ 7 ಸ್ಥಾನಗಳು), ಒಡಿಶಾ (6 ಸ್ಥಾನ), ಉತ್ತರ ಪ್ರದೇಶ (14 ಸ್ಥಾನ) ಮತ್ತು ಪಶ್ಚಿಮ ಬಂಗಾಳ (8 ಸ್ಥಾನ)ದಲ್ಲಿ ಮತದಾನ ನಡೆಯಲಿದೆ. ಹರಿಯಾಣದಲ್ಲಿ (223) ಗರಿಷ್ಠ ಅಭ್ಯರ್ಥಿಗಳು ಕಣದಲ್ಲಿದ್ದರೆ, ಜಮ್ಮು ಮತ್ತು ಕಾಶ್ಮೀರದಿಂದ (20) ಕನಿಷ್ಠ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಂದು (ಮೇ 23) ಸಂಜೆ ಬಹಿರಂಗ ಮತ ಪ್ರಚಾರ ಕೊನೆಗೊಂಡಿದ್ದು, ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಡೋರ್ ಟು ಡೋರ್ ಪ್ರಚಾರ ಮಾಡುತ್ತಿದ್ದಾರೆ.
ಬಿಹಾರ: ಈ ಹಂತದಲ್ಲಿ ಒಟ್ಟು ಎಂಟು ಸ್ಥಾನಗಳಿಗೆ ಮತದಾನ ನಡೆಯಲಿದೆ. ವಾಲ್ಮೀಕಿನಗರ, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಶಿವಾರ್, ವೈಶಾಲಿ, ಗೋಪಾಲ್‌ಗಂಜ್, ಸಿವಾನ್ ಮತ್ತು ಮಹಾರಾಜ್ಗಂಜ್ನಲ್ಲಿ ಮತದಾನ ನಡೆಯಲಿದ್ದು, 86 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಹರಿಯಾಣ: ಈ ರಾಜ್ಯದ ಎಲ್ಲಾ 10 ಸ್ಥಾನಗಳಿಗೆ ಮತದಾನ ಜರುಗಲಿದೆ. ಇಲ್ಲಿ ಒಟ್ಟು 223 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಹಂತದಲ್ಲಿ ಅಂಬಾಲಾ, ಕುರುಕ್ಷೇತ್ರ, ಸಿರ್ಸಾ, ಹಿಸಾರ್, ಕರ್ನಾಲ್, ಸೋನಿಪತ್, ರೋಹ್ಟಕ್, ಭಿವಾನಿ-ಮಹೇಂದ್ರಗಢ, ಗುರ್ಗಾಂವ್ ಮತ್ತು ಫರಿದಾಬಾದ್ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಮ್ಮು ಮತ್ತು ಕಾಶ್ಮೀರ: ಇಲ್ಲಿ ಒಟ್ಟು 20 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅನಂತನಾಗ್-ರಜೌರಿ ಲೋಕಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಜಾರ್ಖಂಡ್: ಇಲ್ಲಿ 4 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಒಟ್ಟು 93 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಹಂತದಲ್ಲಿ ಗಿರಿದಿಹ್, ಧನ್ಬಾದ್, ರಾಂಚಿ ಮತ್ತು ಜಮ್ಶೆಡ್‌ಪುರ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ದೆಹಲಿ: ಎಲ್ಲ 7 ಸ್ಥಾನಗಳಿಗೂ ಚುನಾವಣೆ ನಡೆಯಲಿದ್ದು 162 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಾಂದಿನಿ ಚೌಕ್, ಈಶಾನ್ಯ ದೆಹಲಿ, ಪೂರ್ವ ದೆಹಲಿ, ನವದೆಹಲಿ, ವಾಯುವ್ಯ ದೆಹಲಿ, ಪಶ್ಚಿಮ ದೆಹಲಿ ಮತ್ತು ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರ ಮತದಾನಕ್ಕೆ ಸಜ್ಜಾಗಿವೆ.
ಒಡಿಶಾ: 6 ಸ್ಥಾನಗಳಿಗೆ ನಡೆಯುವ ಈ ಹಂತದ ಚುನಾವಣೆಯಲ್ಲಿ ಒಟ್ಟು 64 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ ಸಂಬಲ್ಪುರ, ಕಿಯೋಂಜರ್, ಧೆಂಕನಲ್, ಪುರಿ, ಭುವನೇಶ್ವರ ಮತ್ತು ಕಟಕ್ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಉತ್ತರ ಪ್ರದೇಶ: ಆರನೇ ಹಂತದಲ್ಲಿ ಉತ್ತರ ಪ್ರದೇಶದ 14 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಒಟ್ಟು 162 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಸುಲ್ತಾನ್‌ಪುರ, ಪ್ರತಾಪ್‌ಗಢ, ಫುಲ್‌ಪುರ್, ಅಲಹಾಬಾದ್, ಅಂಬೇಡ್ಕರ್ ನಗರ, ಶ್ರಾವಸ್ತಿ, ದುಮರಿಯಾಗಂಜ್, ಬಸ್ತಿ, ಸಂತ ಕಬೀರ್ ನಗರ, ಲಾಲ್‌ಗಂಜ್, ಅಜಂಗಢ, ಜೌನ್‌ಪುರ್, ಮಚ್ಲಿಶಹರ್ ಮತ್ತು ಭದೋಹಿಯಲ್ಲಿ ಮತದಾನ ನಡೆಯಲಿದೆ.
ಪಶ್ಚಿಮ ಬಂಗಾಳ: 8 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಕಣದಲ್ಲಿ ಒಟ್ಟು 79 ಅಭ್ಯರ್ಥಿಗಳಿದ್ದಾರೆ. ಈ ಹಂತದಲ್ಲಿ ತಮ್ಲುಕ್, ಕಂಠಿ, ಘಟಾಲ್, ಜಾರ್ಗ್ರಾಮ್ (ಎಸ್ಟಿ), ಮೇದಿನಿಪುರ್, ಪುರುಲಿಯಾ, ಬಂಕುರಾ ಮತ್ತು ಬಿಷ್ಣುಪುರ್ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
2024ರ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು, ಈಗಾಗಲೇ 5 ಹಂತದ ಮತದಾನ ಪೂರ್ಣಗೊಂಡಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 19, ಎರಡನೇ ಹಂತ ಏಪ್ರಿಲ್ 26, ಮೂರನೇ ಹಂತ ಮೇ 7, ನಾಲ್ಕನೇ ಹಂತ ಮೇ 13 ಮತ್ತು ಐದನೇ ಹಂತ ಮೇ 20 ರಂದು ನಡೆಸಲಾಯಿತು. ಆರನೇ ಹಂತವು ಮೇ 25 ರಂದು ಮತ್ತು ಏಳನೇ ಹಂತವು ಜೂನ್ 1 ರಂದು ನಡೆಯಲಿದೆ. ಫಲಿತಾಂಶ ಜೂನ್ 4 ರಂದು ಪ್ರಕಟಗೊಳ್ಳಲಿದೆ.
ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕೆ ಕತ್ತೆ ಮೇಲೆ ಬಂದ ಸ್ವತಂತ್ರ ಅಭ್ಯರ್ಥಿ! - Campaign With Donkey