ಹೈದರಾಬಾದ್: 2024ರ ಲೋಕಸಭಾ ಚುನಾವಣೆಗೆ ಮತದಾನದ ದಿನಾಂಕ ಘೋಷಣೆಯ ಮೂಲಕ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಪ್ರಾರಂಭವಾಗಿದೆ. ಈ ಬಾರಿ ಚುನಾವಣಾ ಆಯೋಗ ಮತದಾನ ಕೇಂದ್ರಗಳಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಿದೆ. ವಿಶೇಷವಾಗಿ ಗರ್ಭಿಣಿಯರಿಗೆ ಸೂಕ್ತ ವ್ಯವಸ್ಥೆ, ವಿಶೇಷಚೇತನರಿಗೆ ರ‍್ಯಾಂಪ್ ಹಾಗೂ ಅಂಗವಿಕಲರಿಗೆ ಗಾಲಿಕುರ್ಚಿ ವ್ಯವಸ್ಥೆ ಇರಲಿದೆ. ಅಲ್ಲದೇ, ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿದೆ.
ಏಕ ಬಳಕೆಯ ಪ್ಲಾಸ್ಟಿಕ್ ಕಡಿಮೆ ಮಾಡಲು ಒತ್ತು: ಮತದಾನ ಕೇಂದ್ರಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳು ಇರಲಿವೆ. ಇದಲ್ಲದೇ, ಮತದಾನ ಕೇಂದ್ರಗಳಲ್ಲಿ ಶೆಡ್ಗಳು ಮತ್ತು ಲೈಟ್ ವ್ಯವಸ್ಥೆ ಮಾಡಲಾಗುತ್ತದೆ. ಚುನಾವಣಾ ಆಯೋಗವು ಪರಿಸರದ ಹಿತದೃಷ್ಟಿಯಿಂದ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಿದೆ. ಇದರಿಂದ ಚುನಾವಣೆಯ ನಂತರ ಮತಗಟ್ಟೆಯಲ್ಲಿ ಯಾವುದೇ ಕಸ ಇರುವುದಿಲ್ಲ, ಕಾರ್ಬನ್ ಫೂಟ್ ಪ್ರಿಂಟ್ ಕಡಿಮೆ ಇರಲಿದೆ.
ವೃದ್ಧರಿಗೆ, ವಿಶೇಷಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ: 85 ವರ್ಷ ಮೇಲ್ಪಟ್ಟ ಮತದಾರರ ಮನೆಗಳಿಗೆ ತೆರಳಿ ಮತ ಚಲಾಯಿಸಲು ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ. ಇದಲ್ಲದೇ, ಶೇಕಡಾ 40 ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರು, ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ದೇಶಾದ್ಯಂತ 97 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 49.7 ಕೋಟಿ ಪುರುಷರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷ ಮತದಾರರಿಗಿಂತ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ. 88.40 ಲಕ್ಷ ವಿಕಲಚೇತನರು, 19.1 ಲಕ್ಷ ಮಿಲಿಟರಿ ಭದ್ರತಾ ಸಿಬ್ಬಂದಿ ಮತ್ತು 48 ಸಾವಿರ ತೃತೀಯ ಲಿಂಗಿ ಮತದಾರರು ಇದ್ದಾರೆ. ಈ ಬಾರಿ 1.80 ಲಕ್ಷ ಹೊಸ ಮತದಾರರು ಇದೇ ಮೊದಲ ಬಾರಿಗೆ (18-19 ವಯಸ್ಸು) ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಏಳು ಹಂತಗಳಲ್ಲಿ ಮತದಾನ(ನವದೆಹಲಿ): 2024ರ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ದೇಶಾದ್ಯಂತ 543 ಲೋಕಸಭೆ ಕ್ಷೇತ್ರಗಳಿಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮುಖ್ಯ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ಮಾಹಿತಿಯನ್ನು ನೀಡಿದರು. ಲೋಕಸಭೆ ಚುನಾವಣೆ, ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹಾಗೂ ವಿವಿಧ ರಾಜ್ಯಗಳ 26 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆಗಳಿಗೆ ದಿನಾಂಕ ಘೋಷಿಸಿದರು. ಈ ಎಲ್ಲ ಚುನಾವಣೆಗಳ ಮತ ಎಣಿಕೆಯು ಜೂನ್ 4ರಂದು ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ 2 ಹಂತಗಳಲ್ಲಿ ಮತದಾನ; ಮೇ 7ರಂದು ಸುರಪುರ ವಿಧಾನಸಭಾ ಉಪ ಚುನಾವಣೆ