ಜಾಂಜಗೀರ್ ಚಂಪಾ(ಛತ್ತೀಸ್ಗಢ): ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ 14 ವರ್ಷದ ಬಾಲಕನ ಬಾಯಿಗೆ ಜೀವಂತ ಮೀನು ನುಗ್ಗಿ, ಗಂಟಲಲ್ಲಿ ಸಿಲುಕಿಕೊಂಡ ಅಪರೂಪದ ಘಟನೆ ನಡೆದಿದೆ. ವಿಷಯ ತಿಳಿದ ಸ್ಥಳೀಯರು ಬಾಲಕನ ಗಂಟಲಲ್ಲಿ ಸಿಲುಕಿದ್ದ ಮೀನನ್ನು ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ, ಆದರೆ ಅವರ ಪ್ರಯತ್ನ ಫಲಿಸಲಿಲ್ಲ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ಅಕಲ್ತಾರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಇಲ್ಲಿನ ವೈದ್ಯರು ಮೀನನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ, ಅವರ ಪ್ರಯತ್ನವು ವಿಫಲವಾಗಿದೆ. ಬಾಲಕನನ್ನು ಅಲ್ಲಿಂದ ಬಿಲಾಸ್‌ಪುರದ ಸಿಮ್ಸ್‌ಗೆ ಕರೆದೊಯ್ದಿದ್ದಾರೆ. ವೈದ್ಯರು ಮೀನನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಕಣ್ಣಿನ ದೃಷ್ಟಿಯಿಲ್ಲದಿದ್ದರೂ ಎಲ್ಲರನ್ನು ಮಂತ್ರಮುಗ್ಧಗೊಳಿಸುವ ಸಂಗೀತ ನುಡಿಸುವ ಕಲೆಗಾರ ಈ ನಂದಕಿಶೋರ್ - blind musician
ಜೀವಂತ ಮೀನು ನುಂಗಿದ 11 ತಿಂಗಳ ಮಗು, ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ವೈದ್ಯರು(ಶಿವಮೊಗ್ಗ): ಇತ್ತೀಚೆಗೆ, ಸುಮಾರು 10 ಸೆಂಟಿ ಮೀಟರ್ ಉದ್ದದ ಜೀವಂತ ಮೀನು ನುಂಗಿ ಸಾವು - ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ 11 ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಜೀವಂತ ಮೀನು ಹೊರತೆಗೆದಿದ್ದರು. ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿತ್ತು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗಂಜೆನಹಳ್ಳಿಯ ಯೋಗೇಶ್ ಹಾಗೂ ರೋಜಾ ದಂಪತಿಯ ಪುತ್ರ 11 ತಿಂಗಳ ಪ್ರತೀಕ್ ಆಕಸ್ಮಿಕವಾಗಿ ಮನೆಯಲ್ಲಿ ಜೀವಂತ ಮೀನು ನುಂಗಿದ್ದನು. ತಕ್ಷಣ ಪೋಷಕರು ನ್ಯಾಮತಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಶಿವಮೊಗ್ಗದ ಮಕ್ಕಳ ಆಸ್ಪತ್ರೆ ಸರ್ಜಿಗೆ ಕರೆ ತಂದಿದ್ದರು. ಮಗು ಹೇಗೆ ಮೀನು ನುಂಗಿತು ಎಂದು ತಿಳಿದುಕೊಂಡ ವೈದ್ಯರು, ಮಗುವಿನ ಬಾಯಿಗೆ ಲಾರಿಂಗೋ ಸ್ಕೋಪ್ ಹಾಕಿ ನೋಡಿದ್ದರು. ಆಗ ಗಂಟಳಿನ ಒಳ ಭಾಗದಲ್ಲಿ ಎರಡು ಮೀನು ಸಿಲುಕಿಕೊಂಡಿರುವುದು ಪತ್ತೆಯಾಗಿತ್ತು. ನಂತರ ಸಣ್ಣ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಹೊರತೆಗೆದಿದ್ದರು.