ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಎತ್ತರ ಪ್ರದೇಶಗಳಲ್ಲಿ ಸಾಧಾರಣ ಹಿಮ ಮಳೆಯಾಗಿದೆ. ಆದರೆ ಕಣಿವೆ ಪ್ರದೇಶದ ಜನರು ಈ ಬಾರಿ ಇನ್ನೂ ಹೊಸ ಹಿಮ ಮಳೆ (ನವ್ ಶೀನ್) ಪೂರ್ಣ ಪ್ರಮಾಣದಲ್ಲಿ ಕಂಡಿಲ್ಲ. ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಪಹಲ್ಗಾಮ್ನಲ್ಲಿ ಸಾಧಾರಣ ಹಿಮ ಮಳೆ ಸುರಿದಿದೆ. ಆನಂತ್ನಾಗ್ ಜಿಲ್ಲೆಯ ಕೊಕೆರ್ನಾಗ್, ಕುಪ್ವಾರ್, ಗುರೆಜ್ನಲ್ಲಿ ಹಿಮಮಳೆಯಾಗಿದೆ.
ಸಾಂಪ್ರದಾಯಿಕವಾಗಿ ಕಾಶ್ಮೀರದಲ್ಲಿ ಹೊಸ ಹಿಮ ಮಳೆ ಸುರಿದಾಗ ಅಲ್ಲಿನ ಜನರು ಪರಸ್ಪರ ಶುಭ ಕೋರಿ, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಚಳಿಗಾಲದ ಭೋಜನ ಸವಿಯುವುದುಂಟು. ಮಕ್ಕಳು ಬಿದ್ದ ಹಿಮದಿಂದ ಸ್ನೋಮಾನ್ ತಯಾರಿಸಿ ಸ್ನೋಬಾಲ್ನಲ್ಲಿ ಆಡುವುದು ವಾಡಿಕೆ.
ಆದರೆ, ಈ ಬಾರಿ ಕಣಿವೆ ಜನರಿಗೆ ಪ್ರತಿಕೂಲ ಹವಾಮಾನ ನಿರಾಶೆ ಮೂಡಿಸಿದೆ. ಹಿಮ ಮಳೆ ಸುರಿಯುವ 40 ದಿನಗಳ ಅವಧಿಯಾದ ಚಿಲ್ಲಾ ಇ ಕಲನ್ ಡಿಸೆಂಬರ್ 21ರಿಂದಲೇ ಆರಂಭವಾಗಿದ್ದರೂ ಶುಷ್ಕ ವಾತಾವರಣ ಮುಂದುವರೆದಿದೆ. ಕಳೆದ ಎರಡು ಮೂರು ದಿನಗಳಿಂದ ಕೆಲವು ಪ್ರದೇಶದಲ್ಲಿ ಮಾತ್ರ ಹಗುರ ಹಿಮ ಮಳೆ ಆರಂಭವಾಗಿದೆ.
ಜಮ್ಮು ವಿಭಾಗ ಮತ್ತು ಕಣಿವೆ ಪ್ರದೇಶದಲ್ಲಿ ಕನಿಷ್ಠ ತಾಪಮಾನ ಹೆಚ್ಚುತ್ತಿದ್ದು, ಹಿಮಮಳೆ ಸಾಧ್ಯತೆ ನಿರೀಕ್ಷಿಸಲಾಗಿದೆ. ಶ್ರೀನಗರದಲ್ಲಿ 3.6, ಗುಲ್ಮರ್ಗ್ನಲ್ಲಿ 3.2 ಮತ್ತು ಪಹಲ್ಗಾಮ್ನಲ್ಲಿ 0.1 ಕನಿಷ್ಠ ತಾಪಮಾನ ದಾಖಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಎತ್ತರ ಪ್ರದೇಶದಲ್ಲಿ ಮುಂದಿನ 36 ಗಂಟೆ ಸಾಧಾರಣದಿಂದ ಅಧಿಕ ಮಳೆಯಾಗುವ ಸಾಧ್ಯತೆ ಇದೆ.
ನಿರಾಶೆ ಮೂಡಿಸಿದ ಚಿಲ್ಲಾ ಇ ಕಲನ್: 40 ದಿನಗಳ ಈ ಚಿಲ್ಲಾ ಇ ಕಲಾನ್ ಅವಧಿಯಲ್ಲಿ ಕಣಿವೆಯಲ್ಲಿ ಭಾಗಿ ಮಳೆಯಾಗುತ್ತದೆ. ಇದು ಪ್ರವಾಸಿಗರ ಆಕರ್ಷಣೀಯ ಸಮಯವೂ ಹೌದು. ಅಲ್ಲದೆ ಇದು ಇಲ್ಲಿನ ಹವಾಮಾನದ ಮುನ್ಸೂಚಕವೂ ಆಗಿರುತ್ತದೆ. ಕಾರಣ ಈ ಅವಧಿಯಲ್ಲಿ ಬೀಳುವ ಮಳೆಯ ಇಲ್ಲಿನ ಭತ್ತದ ಬೆಳೆಗೆ ಅವಶ್ಯಕ. ಈ ಬಾರಿಯ ಚಿಲ್ಲಾ ಇ ಕಲನ್ ನಾಳೆಗೆ ಅಂತ್ಯವಾಗುತ್ತಿದೆ. ಆದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲಿ ಹಿಮ ಸುರಿದಿಲ್ಲ. ಈ ಬಾರಿ ಕಾಶ್ಮೀರ ಶುಷ್ಕ ಚಳಿ ವಾತಾವರಣವನ್ನು ಅನುಭವಿಸಿದ್ದು, ಮಳೆ ಕೊರತೆ ಕಾಡಿದೆ.
ಜಮ್ಮು ಮತ್ತು ಕಾಶ್ಮೀರದ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಹೊಸ ಹವಾಮಾನ ವರದಿ ಅನುಸಾರ, ಈ ಅವಧಿಯು ಜನವರಿ 30ರಿಂದ ಫೆಬ್ರವರಿ 10ರವರೆಗೆ ಮುಂದುವರೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಹಿಮ ಮಳೆ ನಿರೀಕ್ಷಿಸಬಹುದು. ಕೆಲವು ಜಿಲ್ಲೆಗಳಲ್ಲಿ ಜನವರಿ 31ರಂದು ಸಾಧಾರಣೆ ಹಿಮ ಮಳೆ ಆಗಲಿದೆ. ಈ ಹವಾಮಾನ ಬದಲಾವಣೆಯು ಇಲ್ಲಿನ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲಿದೆ.(ಐಎಎನ್ಎಸ್)
ಇದನ್ನೂ ಓದಿ: ಕಾಶ್ಮೀರದಲ್ಲಿ ಚಳಿ ಗಾಳಿಯ ಅಬ್ಬರ: ಹೆಪ್ಪುಗಟ್ಟುತ್ತಿರುವ ಸರೋವರಗಳು, ಕೊಳವೆಗಳಲ್ಲಿನ ನೀರು