ಮಿರ್ಜಾಪುರ (ಉತ್ತರಪ್ರದೇಶ): ಇಲ್ಲಿನ ಹಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲಾಹಿ ಗ್ರಾಮದಲ್ಲಿ ಬುಧವಾರ ಚಿರತೆಯೊಂದು ಕಾಡಿನಿಂದ ಗ್ರಾಮಕ್ಕೆ ನುಗ್ಗಿದೆ. ಈ ವೇಳೆ ಗ್ರಾಮದ ಬಡಾವಣೆಯಲ್ಲಿ ಯುವಕನ ಮೇಲೆ ಚಿರತೆ ದಾಳಿ ಮಾಡಿದೆ. ಇದರಿಂದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇಂದು ಬೆಳಗ್ಗೆ ಬೆಲಾಹಿ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ಚಿರತೆಯೊಂದು ಸುಮಾರು 500 ಮೀಟರ್ ದೂರದಲ್ಲಿರುವ ಅಭಯಾರಣ್ಯ ವನ್ಯಜೀವಿ ಪ್ರದೇಶದ ಅರಣ್ಯದಿಂದ ಗ್ರಾಮಕ್ಕೆ ನುಗ್ಗಿತ್ತು. ಈ ವೇಳೆ ಯುವಕನ ಮೇಲೆ ಚಿರತೆ ದಾಳಿ ನಡೆಸಿ ಮನೆಯೊಂದಕ್ಕೂ ದಾಂಗುಡಿ ಇಟ್ಟಿತ್ತು.
ಬೆಲಾಹಿ ಗ್ರಾಮದ ಶ್ರವಣ್ ಕುಮಾರ್ ಎಂಬುವರು ಇಂದು ಬೆಳಗ್ಗೆ ಮಲವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಾಗ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಬಳಿಕ ಚಿರತೆ ದಾಳಿಯಿಂದ ಆತ ನೇರ ತನ್ನ ಮನೆಗೆ ಬಂದಿದ್ದಾನೆ. ರಕ್ತಸಿಕ್ತ ಮಗನನ್ನು ಕಂಡ ಪೋಷಕರು ಕೂಡಲೇ ಗಾಯಗೊಂಡ ಶ್ರವಣ್ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಯ್ದಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಆಗಮಿಸಿ ಚಿರತೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಜಿಲ್ಲೆಯಿಂದ ಚಿರತೆ ಹಿಡಿಯಲು ಬೋನನ್ನು ಕೂಡ ತರಲಾಗಿದೆ. ಸದ್ಯ ಚಿರತೆ ಗ್ರಾಮಕ್ಕೆ ನುಗ್ಗಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಈ ಕುರಿತು ಡಿಎಫ್‌ಒ ಅರವಿಂದ್ ರಾಜ್ ಮಿಶ್ರಾ ಮಾತನಾಡಿ, ಬೆಲಾಹಿ ಗ್ರಾಮದ ಮನೆಯೊಂದರಲ್ಲಿ ಚಿರತೆ ಕಾಣಿಸಿಕೊಂಡಿರುವ ಸುದ್ದಿ ಬಂದಿದ್ದು, ಅದನ್ನು ಹಿಡಿಯಲು ತಂಡವು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.
ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಹಾಸನದಲ್ಲಿ 18 ಕಡೆ ಎಸ್ಐಟಿ ಶೋಧ - PRAJWAL REVANNA CASE