ನವದೆಹಲಿ: ದಿಲ್ಲಿಯ ಬುರಾರಿ ಪ್ರದೇಶದ ಜಗತ್‌ಪುರ ಗ್ರಾಮಕ್ಕೆ ಚಿರತೆಯೊಂದು ಏಕಾಏಕಿ ನುಗ್ಗಿದ್ದರಿಂದ ಆತಂಕ ಸೃಷ್ಟಿಯಾಗಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಜನರ ಕೇಕೆ ಮತ್ತು ಕೂಗಾಟಕ್ಕೆ ಬೆಚ್ಚಿಬಿದ್ದು, 10 ರಿಂದ 12 ಜನರನ್ನು ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಯಮುನಾ ತೀರದಿಂದ ಉತ್ತರ ದೆಹಲಿಯ ಬುರಾರಿ ಪ್ರದೇಶದ ಜಗತ್‌ಪುರ ಗ್ರಾಮಕ್ಕೆ ನುಗ್ಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೊಣ್ಣೆಗಳ ಸಹಾಯದಿಂದ ಚಿರತೆಯನ್ನು ಕೋಣೆಯೊಂದರಲ್ಲಿ ಬಂಧಿಸಿದ್ದಾರೆ. ಈ ವೇಳೆ, ಸೆರೆಯಾಗಿದ್ದ ಮನೆಯ ಮೂವರನ್ನು ಕಚ್ಚಿ ಗಾಯಗೊಳಿಸಿದೆ. ಚಿರತೆಯನ್ನು ಕೆಲವರು ಹಿಡಿಯಲು ಬೆನ್ನಟ್ಟಿದ್ದು, ಇನ್ನು ಕೆಲವರು ಗಾಬರಿಯಿಂದ ಓಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಚಿರತೆ ಬಂದಿರುವ ಬಗ್ಗೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತಾದರೂ ನಾಲ್ಕು ಗಂಟೆ ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡರಲಿಲ್ಲ. ಬಳಿಕ ಆಗಮಿಸಿದರೂ ಅಂದುಕೊಂಡಂತೆ ಚಿರತೆಯನ್ನು ಮನೆಯಿಂದ ಹೊರ ತೆಗೆಯಲು ಸಾಧ್ಯವಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ, ದೆಹಲಿ ಅಗ್ನಿಶಾಮಕ ಇಲಾಖೆಯ ತಂಡ ಮತ್ತು ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯಕ್ಕೆ ಮನೆಯೊಳಗೆ ಬಲೆಗಳನ್ನು ಹಾಕಲಾಗಿದೆ. ಇದಕ್ಕಾಗಿ ಪೊಲೀಸ್ ಬಂದೋಬಸ್ತ್ ಸಹ ಇದೆ.
ಮೊದಲ ಬಾರಿ ಚಿರತೆಯೊಂದು ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದರಿಂದ ಜನ ಭಯಭೀತರಾಗಿದ್ದಾರೆ. ಸುತ್ತಮುತ್ತಲ ಪ್ರದೇಶದಲ್ಲಿ ಮತ್ತಷ್ಟು ಚಿರತೆಗಳು ಇರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಕೂಡ ಇದೇ ಪ್ರದೇಶದಲ್ಲಿ ಅಪಘಾತದಲ್ಲಿ ಚಿರತೆಯೊಂದು ಸಾವನ್ನಪ್ಪಿತ್ತು. ಇದಾದ ಬಳಿಕ ಈ ಚಿರತೆ ಕಾಣಿಸಿಕೊಂಡಿದೆ. ಹಲವು ಗಂಟೆಗಳ ಕಾಲ ನಿರಂತರ ಕರೆ ಮಾಡಿದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಕೂಗಾಟದಿಂದ ಚಿರತೆ ತನ್ನ ಜೀವ ಉಳಿಸಿಕೊಳ್ಳಲು ಮನೆಗೆ ನುಗ್ಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚಿರತೆ ಮನೆಗೆ ನುಗ್ಗುತ್ತಿದ್ದಂತೆ ಮನೆಯಲ್ಲಿ ಹಾಯಾಗಿ ಮಲಗಿದ್ದ ಜನರು ನಿದ್ದೆಗಣ್ಣಲ್ಲೇ ತಮ್ಮ ಜೀವ ಉಳಿಸಿಕೊಳ್ಳಲು ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ, ಚಿರತೆ ಮನೆಯಲ್ಲಿ ಲಾಕ್ ಆಗಿದೆ. ಸದ್ಯ ಕಾರ್ಯಾಚರಣೆ ನಡೆಯುತ್ತಿದೆ.
''ಸೋಮವಾರ ಬೆಳಗ್ಗೆ 6:14 ಗಂಟೆಗೆ ಜಗತ್‌ಪುರ ಗ್ರಾಮದಲ್ಲಿ ಚಿರತೆ ಮನೆಗೆ ನುಗ್ಗಿರುವ ಬಗ್ಗೆ ವಜೀರಾಬಾದ್ ಪೊಲೀಸ್ ಠಾಣೆಗೆ ಪೊಲೀಸ್ ನಿಯಂತ್ರಣ ಕೊಠಡಿ (ಪಿಸಿಆರ್) ಕರೆ ಬಂದಿತು. ಅದರಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆ ಸ್ಥಳದಲ್ಲೇ ಬೀಡುಬಿಟ್ಟಿದೆ. ಚಿರತೆಯನ್ನು ಕೊಠಡಿಯೊಂದರಲ್ಲಿ ಬಂಧಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ'' ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.