ವಯನಾಡ್: ಲೆಬನಾನ್ ಮತ್ತು ಸಿರಿಯಾದಲ್ಲಿ ಪೇಜರ್, ವಾಕಿಟಾಕಿ ಸ್ಫೋಟ ನಡೆಸಿ ಹಲವಾರು ಉಗ್ರರನ್ನು ಇಸ್ರೇಲ್ ಬೇಟೆಯಾಡಿತ್ತು. ಇದರ ಹಿಂದೆ ಭಾರತ ಮೂಲದ ವ್ಯಕ್ತಿಯ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಆತನ ಕುಟುಂಬವನ್ನು ಕೇರಳದಲ್ಲಿ ತಪಾಸಣೆ ನಡೆಸಿದ್ದಾರೆ.
ನಾರ್ವೆಯಲ್ಲಿ ವಾಸಿಸುತ್ತಿರುವ ಕೇರಳದ ವಯನಾಡು ಮೂಲದ ರಿನ್ಸನ್ ಜೋಸ್ ಪೇಜರ್ ಸ್ಫೋಟದ ಶಂಕಿತ ವ್ಯಕ್ತಿಯಾಗಿದ್ದಾನೆ. ಹೀಗಾಗಿ ಪೊಲೀಸರು ಆತನ ಕುಟುಂಬ ವಾಸಿಸುತ್ತಿರುವ ಮಾನಂದವಾಡಿ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸುತ್ತಲಿನ ಜನರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಯಾವುದೇ ಮಹತ್ವದ ಅಂಶ ಪತ್ತೆಯಾಗಿಲ್ಲ.
ಸಾಮಾನ್ಯ ತಪಾಸಣೆ: ರಿನ್ಸನ್ ವಿರುದ್ಧ ಯಾವುದೇ ಪ್ರಕರಣ ಅಥವಾ ತನಿಖೆ ನಡೆಯುತ್ತಿಲ್ಲ. ವಿಶೇಷ ಶಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇಂತಹ ಆರೋಪಗಳು ಬಂದಾಗ ಸಹಜವಾಗಿ ತಪಾಸಣೆ ನಡೆಯುತ್ತದೆ. ಹೀಗಾಗಿ ಪೊಲೀಸರು ಪರಿಶೀಲಿಸಿದ್ದಾರೆ. ರಿನ್ಸ್ನ್ ಅವರ ಕುಟುಂಬ ಪೊಲೀಸರ ರಕ್ಷಣೆಗೆ ಮನವಿ ಮಾಡಿಲ್ಲ. ದಶಕದ ಹಿಂದೆ ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ್ದ ರಿನ್ಸನ್ ಈಗ ನಾರ್ವೆ ಪ್ರಜೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಿನ್ಸನ್ ಅವರ ಸಂಬಂಧಿಯೊಬ್ಬರು ಮಾಧ್ಯಮಗಳ ಮೂಲಕ ಘಟನೆಯ ಬಗ್ಗೆ ತಿಳಿದುಕೊಂಡರು. ಕುಟುಂಬಸ್ಥರು ತಿಳಿಸುವಂತೆ, ರಿನ್ಸನ್ ಎಂಬಿಎ ಮುಗಿಸಿ 10 ವರ್ಷಗಳ ಹಿಂದೆ ಭಾರತ ತೊರೆದಿದ್ದರು. ಪ್ರಸ್ತುತ ನಾರ್ವೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಅವರು ಕೇರಳಕ್ಕೆ ಭೇಟಿ ನೀಡಿದ್ದರು. ಜನವರಿಯಲ್ಲಿ ವಾಪಸ್ ತೆರಳಿದ್ದರು. ಆತ ನಾರ್ವೆಯಲ್ಲಿ ಸ್ವಂತ ವ್ಯವಹಾರ ನಡೆಸುತ್ತಿದ್ದಾನೆಯೇ ಎಂಬುದು ಖಚಿತವಿಲ್ಲ. ಆತನ ಪತ್ನಿಯೂ ನಾರ್ವೆಯಲ್ಲಿ ಕೆಲಸ ಮಾಡುತ್ತಾರೆ ಎಂದಿದ್ದಾರೆ.
ಪೇಜರ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಾರ್ವೆಯ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಬಗ್ಗೆ ಕೇಳಿದಾಗ, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಕುಟುಂಬ ಹೇಳಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ನಾಯಕ ಸಂದೀಪ್ ವಾರಿಯರ್, ರಿನ್ಸನ್ ನಮ್ಮ ದೇಶದ ಮಗ. ಮತ್ತು ಆತ ನಮ್ಮ ಮಲಯಾಳಿ ವ್ಯಕ್ತಿ. ಹೀಗಾಗಿ ರಿನ್ಸನ್ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಫೋಟದಲ್ಲಿ ಕ್ಲೀನ್ಚಿಟ್: ಲೆಬನಾನ್ನಲ್ಲಿ ಪೇಜರ್ ಸ್ಫೋಟದ ಆರೋಪ ಹೊತ್ತಿದ್ದ ಕೇರಳದ ವಯನಾಡು ಮೂಲದ ವ್ಯಕ್ತಿಗೆ ಬಲ್ಗೇರಿಯಾ ಸರ್ಕಾರ ಕ್ಲೀನ್ಚಿಟ್ ನೀಡಿದೆ. ಕೃತ್ಯದಲ್ಲಿ ರಿನ್ಸನ್ ಪಾತ್ರವನ್ನು ಅಲ್ಲಿನ ಪೊಲೀಸರು ನಿರಾಕರಿಸಿದ್ದಾರೆ. ಹಂಗೇರಿ ಮೂಲದ ಬಿಎಸಿ ಕಂಪನಿ ಉತ್ಪಾದಿಸಿದ ಪೇಜರ್ಗಳನ್ನು ಜೋಸ್ ಒಡೆತನದ ನಾರ್ಟಾ ಗ್ಲೋಬಲ್ ಕಂಪನಿ ಸಾಗಣೆ ಮಾಡಿದೆ. ಇದರಿಂದಾಗಿ ರಿನ್ಸನ್ ಸ್ಫೋಟದಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಅಲ್ಲಿನ ರಾಷ್ಟ್ರೀಯ ತನಿಖಾ ಸಂಸ್ಥೆಯಾದ ಎಸ್ಎಎನ್ಎಸ್ ರಿನ್ಸನ್ ಜೋಸ್ ಕ್ಲೀನ್ಚಿಟ್ ನೀಡಿದೆ.