ನವದೆಹಲಿ: ಕುಂಭಮೇಳಕ್ಕಾಗಿ ರೈಲ್ವೆ ಸಚಿವಾಲಯ ವ್ಯಾಪಕ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಜನವರಿಯಲ್ಲಿ ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಈ ಬೃಹತ್ ಧಾರ್ಮಿಕ ಮೇಳಕ್ಕಾಗಿ 992 ವಿಶೇಷ ರೈಲುಗಳನ್ನು ಓಡಿಸಲು ಯೋಜಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶೇಷ ರೈಲುಗಳನ್ನು ಓಡಿಸುವುದರ ಜೊತೆಗೆ, ಪ್ರಯಾಣಿಕರಿಗೆ ವಿವಿಧ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಲು ಮತ್ತು ನವೀಕರಿಸಲು ಸಚಿವಾಲಯವು 933 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ರೈಲುಗಳ ಸುಗಮ ಸಂಚಾರಕ್ಕಾಗಿ ಪ್ರಯಾಗರಾಜ್ ವಿಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 3,700 ಕೋಟಿ ರೂ.ಗಳ ವೆಚ್ಚದಲ್ಲಿ ರೈಲ್ವೆ ಹಳಿಗಳನ್ನು ಡಬ್ಲಿಂಗ್ ಮಾಡಲಾಗುತ್ತಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಇಬ್ಬರು ರಾಜ್ಯ ಸಚಿವರಾದ ರವ್ನೀತ್ ಸಿಂಗ್ ಬಿಟ್ಟು ಮತ್ತು ವಿ ಸೋಮಣ್ಣ ಅವರು ಶನಿವಾರ ಸಭೆ ನಡೆಸಿ ಜನವರಿ 12 ರಿಂದ ಪ್ರಾರಂಭವಾಗಲಿರುವ ಮೇಳದಲ್ಲಿ ಭಕ್ತರ ಭಾರಿ ದಟ್ಟಣೆಯನ್ನು ನಿಭಾಯಿಸುವ ವ್ಯವಸ್ಥೆಗಳನ್ನು ಪರಿಶೀಲಿಸಿದರು.
"ಸಚಿವರುಗಳು ಉತ್ತರ ರೈಲ್ವೆ, ಉತ್ತರ ಮಧ್ಯ ರೈಲ್ವೆ ಮತ್ತು ಈಶಾನ್ಯ ರೈಲ್ವೆಯಂತಹ ಸಂಬಂಧಿತ ವಲಯಗಳ ಜನರಲ್ ಮ್ಯಾನೇಜರ್ಗಳು ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ನಿಯಮಿತವಾಗಿ ವಿಡಿಯೋ ಕಾನ್ಫರೆನ್ಸ್ ನಡೆಸಿ ಪೂರ್ವಸಿದ್ಧತಾ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ" ಎಂದು ಅಧಿಕಾರಿ ಹೇಳಿದರು.
ಪ್ರಯಾಗ್ ರಾಜ್, ವಾರಣಾಸಿ, ದೀನ್ ದಯಾಳ್ ಉಪಾಧ್ಯಾಯ ಮತ್ತು ಲಕ್ನೋ ಮುಂತಾದ ರೈಲ್ವೆ ವಿಭಾಗಗಳ ವಿಭಾಗೀಯ ವ್ಯವಸ್ಥಾಪಕರು ಸಹ ಈ ಸಭೆಗಳಲ್ಲಿ ಭಾಗವಹಿಸಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಬಾರಿಯ ಕುಂಭಮೇಳದಲ್ಲಿ 30 ರಿಂದ 50 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ರೈಲ್ವೆ ಸಚಿವಾಲಯವು 992 ವಿಶೇಷ ರೈಲುಗಳನ್ನು ಓಡಿಸಲು ಯೋಜಿಸಿದೆ. ಅಲ್ಲದೆ ದೇಶದ ವಿವಿಧ ನಗರಗಳಿಂದ ಪ್ರಯಾಗ್ ರಾಜ್ಗೆ 6,580 ಸಾಮಾನ್ಯ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಯೋಜಿಸಿದೆ.
"2019 ರಲ್ಲಿ 24 ಕೋಟಿಗೂ ಹೆಚ್ಚು ಜನ ಕುಂಭಮೇಳದಲ್ಲಿ ಭಾಗವಹಿಸಿದ್ದರು ಮತ್ತು ನಮ್ಮ 5,000 ನಿಯಮಿತ ರೈಲುಗಳ ಜೊತೆಗೆ 694 ವಿಶೇಷ ರೈಲುಗಳನ್ನು ಓಡಿಸಿದ್ದೇವೆ. ಆ ಅನುಭವದ ಆಧಾರದ ಮೇಲೆ, ವಿಶೇಷ ರೈಲುಗಳ ಸಂಖ್ಯೆಯನ್ನು ಶೇಕಡಾ 42 ರಷ್ಟು ಅಂದರೆ 992 ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಒಂದು ವೇಳೆ ಸಂಖ್ಯೆಗಳನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯ ಕಂಡುಬಂದಲ್ಲಿ ಅದಕ್ಕೂ ಬ್ಯಾಕಪ್ ಯೋಜನೆ ಸಿದ್ಧಪಡಿಸಲಾಗಿದೆ" ಎಂದು ಅವರು ತಿಳಿಸಿದರು.
ವಿವಿಧ ರಸ್ತೆ ಮೇಲ್ಸೇತುವೆಗಳ ಕಾಮಗಾರಿಗಳಿಗೆ ಸುಮಾರು 440 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ. ಉಳಿದ 495 ಕೋಟಿ ರೂ.ಗಳನ್ನು ನಿಲ್ದಾಣಗಳಿಗೆ ಹೋಗುವ ರಸ್ತೆಗಳ ದುರಸ್ತಿ, ಪ್ಲಾಟ್ ಫಾರ್ಮ್ಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸ್ಥಾಪನೆ, ಪ್ರಯಾಣಿಕರಿಗೆ ಹೆಚ್ಚುವರಿ ವಸತಿ ಘಟಕಗಳು, ನಿಲ್ದಾಣದ ಕಾಯುವ ಕೊಠಡಿಗಳು ಮತ್ತು ವೈದ್ಯಕೀಯ ಸೌಲಭ್ಯಗಳಂತಹ ಅನೇಕ ಚಟುವಟಿಕೆಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
ಇದನ್ನೂ ಓದಿ : ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಹತ್ಯೆ ಖಂಡಿಸಿ ಚುನಾವಣಾ ಪ್ರಚಾರ ನಿಲ್ಲಿಸಿದ ಮೆಹಬೂಬಾ ಮುಫ್ತಿ - Mehbooba Mufti