ಕೋಲ್ಕತ್ತಾ(ಪಶ್ಚಿಮ ಬಂಗಾಳ): ಆತ್ಮಹತ್ಯೆಗೆ ಯತ್ನಿಸಿದ 40 ವರ್ಷದ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಪೊಲೀಸರು ಜಾಣತನದಿಂದ ರಕ್ಷಿಸಿದ್ದಾರೆ. ನೌಕರಿ ಮತ್ತು ಬಿರಿಯಾನಿ ಕೊಡಿಸುವ ಆಸೆ ತೋರಿಸಿ ಆತನನ್ನು ಸೇತುವೆ ಮೇಲಿಂದ ಇಳಿಸಿದ್ದಾರೆ. ನಗರದ ಜನನಿಬಿಡ ವಿಜ್ಞಾನ ನಗರ ಪ್ರದೇಶದಲ್ಲಿ ಸೋಮವಾರ ಈ ಘಟನೆ ನಡೆಯಿತು.
ಘಟನೆಯ ಸಂಪೂರ್ಣ ವಿವರ: ಸ್ಥಳೀಯ ನಿವಾಸಿಯಾದ ಈ ವ್ಯಕ್ತಿ ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾನೆ. ಪತ್ನಿಯೂ ದೂರವಾಗಿದ್ದಾರೆ. ನಾನಾ ಸಮಸ್ಯೆಗಳಿಂದ ತೀವ್ರವಾಗಿ ನೊಂದು ಆತ್ಮಹತ್ಯೆಯ ಹಾದಿ ತುಳಿದಿದ್ದನು. ಸೋಮವಾರ ಮಧ್ಯಾಹ್ನ ತನ್ನ ಹಿರಿ ಮಗಳನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ವಿಜ್ಞಾನ ನಗರಿಯತ್ತ ಹೊರಟಿದ್ದನು. ಈ ಸಂದರ್ಭದಲ್ಲಿ ನನ್ನ ಫೋನ್ ಎಲ್ಲೋ ಬಿದ್ದು ಹೋಗಿದೆ, ಹುಡುಕಿಕೊಂಡು ಬರುತ್ತೇನೆ ಎಂದು ಹೇಳಿ ಮಗಳನ್ನು ರಸ್ತೆಬದಿ ನಿಲ್ಲಿಸಿ ಅಲ್ಲಿಂದ ನಿರ್ಗಮಿಸಿದ್ದಾನೆ. ಈ ವೇಳೆ ಸ್ವಲ್ಪ ದೂರದಲ್ಲಿದ್ದ ರೈಲ್ವೇ ಟ್ರ್ಯಾಕ್ ಸೇತುವೆ ಹತ್ತಿದ್ದು, ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾನೆ. ಇದನ್ನು ಗಮನಿಸಿದ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದರು. ಅಷ್ಟೊತ್ತಿಗೆ ಮಗಳಿಗೂ ವಿಷಯ ಗೊತ್ತಾಗಿದೆ. ಆಕೆ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾಳೆ.
ಕೋಲ್ಕತ್ತಾ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ದಳದವರು ತಕ್ಷಣ ಸ್ಥಳ ತಲುಪಿ ಸೇತುವೆಯಿಂದ ಕೆಳಗಿಳಿಯುವಂತೆ ವ್ಯಕ್ತಿಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಆತನ ಮಾನಸಿಕ ಸ್ಥಿತಿಗತಿ ಬಗ್ಗೆ ಮಗಳಲ್ಲಿ ವಿಚಾರಿಸಲಾಗಿದೆ. ಮನೆಯಲ್ಲಿ ಇರುವ ಪರಿಸ್ಥಿತಿಯ ಬಗ್ಗೆ ಯುವತಿ ಪೊಲೀಸರಿಗೆ ವಿವರಿಸಿದ್ದಾಳೆ. ಇದರ ಆಧಾರದ ಮೇಲೆ ಪೊಲೀಸರು ಮತ್ತೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪೊಲೀಸರು ಮೇಲಧಿಕಾರಿಗಳೊಂದಿಗೆ ಮಾತನಾಡಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಇಷ್ಟದ ಬಿರಿಯಾನಿಯನ್ನೂ ನೀಡುತ್ತೇವೆ ಎಂದು ಬಿರಿಯಾನಿ ಪ್ಯಾಕೆಟ್ ತೋರಿಸಿದ್ದಾರೆ. ಕೊನೆಗೆ ಮನವೊಲಿಕೆಯ ನಂತರ ಆತ ಕೆಳಗಿಳಿಯಲು ಒಪ್ಪಿದ್ದಾನೆ.
ಸೇತುವೆಯಿಂದ ಜಾರಿ ಬಿದ್ದರೆ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಆತ ಸಾವಿಗೀಡಾಗುತ್ತಿದ್ದ ಅಥವಾ ಕೆಳಗಿರುವ ರೈಲ್ವೇ ಹಳಿ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಳ್ಳುವ ಸಾಧ್ಯತೆಯೂ ಇತ್ತು. ಈ ಘಟನೆಯಿಂದ ಸುಮಾರು ಅರ್ಧ ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಬಳಿಕ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ವೈದ್ಯರ ಕೆಲಸಕ್ಕೆ ಮೆಚ್ಚುಗೆ