ಕೊಚ್ಚಿ(ಎರ್ನಾಕುಲಂ): ಕೇರಳದ ಆತ್ಮಾಹುತಿ ದಾಳಿ ಎಸಗಲು ಸಂಚು ರೂಪಿಸಿರುವ ಪ್ರಕರಣಗಳಲ್ಲಿ ರಿಯಾಜ್ ಅಬೂಬಕ್ಕರ್ (29) ಎಂಬ ಉಗ್ರ 'ದೋಷಿ' ಎಂದು ಕೊಚ್ಚಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ಇಂದು ತೀರ್ಪು ನೀಡಿತು. 2019ರಲ್ಲಿ ಈತನನ್ನು ಬಂಧಿಸಲಾಗಿತ್ತು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನಾಳೆ ಪ್ರಕಟಿಸಲಿದೆ.
ಪಾಲಕ್ಕಾಡ್ನ ಕೊಲ್ಲಂಕೋಡ್ ನಿವಾಸಿ ರಿಯಾಜ್ ಅಬೂಬಕರ್, ಕೇರಳದಲ್ಲಿ ಸರಣಿ ಸ್ಫೋಟಕ್ಕೆ ಯೋಜನೆ ರೂಪಿಸಿರುವ ಮೂಲಕ ಭಯೋತ್ಪಾದನಾ ಚಟುವಟಿಕೆಗಳನ್ನು ಬೆಂಬಲಿಸಿದ್ದ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ (UAPA) ಸೆಕ್ಷನ್ 38 ಮತ್ತು 39 ಹಾಗೂ ಭಾರತೀಯ ದಂಡ ಸಂಹಿತೆ 120ಬಿ ಅಡಿಯಲ್ಲಿ ಈತ ತಪ್ಪಿತಸ್ಥ ಎಂದು ನ್ಯಾಯಾಲಯ ಹೇಳಿದೆ.
ಅಪರಾಧಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್ ಕೋರಿತು. ಈಗಾಗಲೇ 5 ವರ್ಷ ಜೈಲು ವಾಸ ಅನುಭವಿಸಿರುವ ಈತ, ಕೆಲವರ ಪ್ರಚೋದನೆಯ ಮೇರೆಗೆ ಐಸಿಸ್ ಸೇರ್ಪಡೆಗೊಂಡಿದ್ದಾನೆ. ಶಿಕ್ಷೆ ರದ್ದುಗೊಳಿಸುವಂತೆ ರಿಯಾಜ್ ಪರ ವಕೀಲರು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಎನ್‌ಐಎ ಕೋರ್ಟ್ ಆರೋಪಿ 'ತಪ್ಪಿತಸ್ಥ' ಎಂದು ಘೋಷಿಸಿದೆ.
ರಿಯಾಜ್, ಭಯೋತ್ಪಾದಕ ಹಾಗೂ ಶ್ರೀಲಂಕಾದ ಈಸ್ಟರ್ ಬಾಂಬ್ ಸ್ಫೋಟದ ರೂವಾರಿ ಜಹ್ರಾನ್ ಹಾಶಿಮ್ ಎಂಬಾತನ ಅನುಯಾಯಿ. ಕೇರಳದಲ್ಲೂ ಇದೇ ರೀತಿಯ ಸ್ಫೋಟ ಸರಣಿಗೆ ಸಂಚು ರೂಪಿಸಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಭಯೋತ್ಪಾದಕ ಗುಂಪಿಗೆ ಸೇರಿಸಿಕೊಳ್ಳಲು ಯತ್ನಿಸುತ್ತಿದ್ದ. ಈ ಬಗ್ಗೆ ಎನ್‌ಐಎ ಹಲವು ಪುರಾವೆಗಳನ್ನು ಸಂಗ್ರಹಿಸಿದೆ. ಅಫ್ಘಾನಿಸ್ತಾನಕ್ಕೆ ಹೋಗಿ ಭಯೋತ್ಪಾದಕರೊಂದಿಗೆ ಸೇರಿಕೊಂಡು ಕೇರಳದಲ್ಲಿ ಸರಣಿ ಆತ್ಮಾಹುತಿ ಬಾಂಬ್ ದಾಳಿಗೆ ಯೋಜಿಸಿದ್ದರ ಬಗ್ಗೆಯೂ ಮಾಹಿತಿ ಕಲೆ ಹಾಕಿದೆ. ಹೊಸ ವರ್ಷಾಚರಣೆ ವೇಳೆ ಆತ್ಮಾಹುತಿ ದಾಳಿ ನಡೆಸುವುದು ಈತನ ಗುರಿಯಾಗಿತ್ತು. ಈ ಉದ್ದೇಶಕ್ಕಾಗಿ ಹಲವು ಜನರನ್ನು ಸಂಪರ್ಕಿಸಿದ್ದಾನೆ. ದುಷ್ಕೃತ್ಯ ನಡೆಸಲು ಇತರರನ್ನು ಪ್ರಚೋದಿಸಲು ನಿರಂತರವಾಗಿ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಭಯೋತ್ಪಾದಕ ಜಹ್ರಾನ್ ಹಶೀಮ್ ಮತ್ತು ಇಸ್ಲಾಮಿಕ್ ವಾಗ್ಮಿ ಝಾಕಿರ್ ನಾಯಕ್ ಎಂಬಾತನ ಭಾಷಣಗಳನ್ನು ಆಲಿಸುತ್ತಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿರುವ ಬಗ್ಗೆ ತನಿಖಾ ಸಂಸ್ಥೆ ಮಾಹಿತಿ ನೀಡಿದೆ.
ರಿಯಾಜ್ 2019ರಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾಗ ಆತನನ್ನು ಬಂಧಿಸಲಾಯಿತು. ಕೇರಳದಿಂದ ಅಫ್ಘಾನಿಸ್ತಾನಕ್ಕೆ ಹೋಗಿ ಐಸಿಸ್ ಸೇರಿದ್ದ ಅಬ್ದುಲ್ ರಶೀದ್ ಅಬ್ದುಲ್ಲಾ ಸೂಚನೆಯ ಮೇರೆಗೆ ರಿಯಾಜ್ ಸ್ಫೋಟಕ್ಕೆ ಸಂಚು ರೂಪಿಸಿದ್ದಾನೆ. ಆರೋಪಿಯ ಫೋನ್‌ನಿಂದ ಅಬ್ದುಲ್ ರಶೀದ್ ಫೋನ್ ಸಂದೇಶಗಳು ಮತ್ತು ಆಡಿಯೊ ಕ್ಲಿಪ್ ಅನ್ನು ಎನ್‌ಐಎ ಸ್ವೀಕರಿಸಿದೆ. ಐಸಿಸ್ ಪ್ರಕರಣದ ಆರೋಪಿ ಅಬ್ದುಲ್ ಖಯೂಮ್ ಅಲಿಯಾಸ್ ಅಬು ಖಾಲಿದ್ ಜೊತೆ ಸಂಪರ್ಕದಲ್ಲಿರುವ ಬಗ್ಗೆಯೂ ಒಪ್ಪಿಕೊಂಡಿದ್ದಾನೆ. ಕೊಚ್ಚಿಯಲ್ಲಿ ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿ ಸಂಚು ರೂಪಿಸಿದ್ದರ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ.
ಆರೋಪಿಗಳೊಂದಿಗೆ ಬಂಧಿತರಾದ ಕೊಲ್ಲಂನ ಮುಹಮ್ಮದ್ ಫೈಸಲ್ ಮತ್ತು ಕಾಸರಗೋಡಿನ ಅಬುಬಕರ್ ಸಿದ್ದಿಕ್ ಎಂಬವರನ್ನು ಬಂಧಿಸಲಾಗಿತ್ತು. ನಂತರ ಇವರನ್ನು ಪ್ರಕರಣದ ಸಾಕ್ಷಿಗಳೆಂದು ಪರಿಗಣಿಸಲಾಗಿತ್ತು. ಇವರ ವಿರುದ್ಧ ಯುಎಪಿಎ ಸೆಕ್ಷನ್ 38 ಮತ್ತು 39ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಚ್ಚಿ ಎನ್‌ಐಎ ನ್ಯಾಯಾಲಯದಲ್ಲಿ ಜನವರಿ 31ರಂದು ಅಂತಿಮ ತೀರ್ಪ ಪ್ರಕಟಿಸಲಾಗಿತ್ತು.
ಆರೋಪಿ ಮೊಹಮ್ಮದ್ ಫೈಸಲ್ ಮತ್ತು ಅಬೂಬಕರ್ ಸಿದ್ದಿಕ್ ಕೇರಳದಲ್ಲಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಬಗ್ಗೆ ಎನ್‌ಐಎ ಪತ್ತೆ ಮಾಡಿತ್ತು. ಅಬ್ದುಲ್ ರಶೀದ್ನ ಧ್ವನಿ ತುಣುಕುಗಳು, ಐಎಸ್ ಚಿತ್ರಗಳು, ವಿಡಿಯೊಗಳು ಮತ್ತು ಆರೋಪಿಯ ಫೋನ್‌ನಿಂದ ಪಡೆದ ಹಲವು ಐಎಸ್ ದಾಖಲೆಗಳನ್ನು ಸಾಕ್ಷ್ಯವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆರೋಪಿಗಳ ಪರ ವಕೀಲ ಬಿ.ಎ.ಆಲೂರ್ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ ಪರ ಅಭಿಯೋಜಕ ಶ್ರೀನಾಥ್ ವಾದ ಮಂಡಿಸಿದ್ದರು.
ಇದನ್ನೂ ಓದಿ: ಐಸಿಸ್ ಬೆಂಬಲಿಸುತ್ತಿದ್ದ ಆರೋಪಿ ದೋಷಿ: ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು