ಕೊಚ್ಚಿ(ಕೇರಳ): ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ದೇವರ ದರ್ಶನದ ಸಾಲಿನಲ್ಲಿ ಕಾದು ನಿಂತಿದ್ದ ಸಾವಿರಾರು ಭಕ್ತರನ್ನು ಹಲವು ಗಂಟೆಗಳ ಕಾಲ ತಡೆದು, ಮಲಯಾಳಂನ ವಿವಾದಿತ ನಟ ದಿಲೀಪ್ ಅವರಿಗೆ ವಿಶೇಷ ದರ್ಶನ ಕಲ್ಪಿಸಿದ ಪೊಲೀಸರು ಹಾಗೂ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ನಡೆಗೆ ಕೇರಳ ಹೈಕೋರ್ಟ್ ಗರಂ ಆಗಿದೆ.
ನ್ಯಾ.ಅನಿಲ್ ಕೆ.ನರೇಂದ್ರನ್ ಮತ್ತು ನ್ಯಾ.ಮುರಳಿ ಕೃಷ್ಣ ಎಸ್ ಅವರಿದ್ದ ಪೀಠ ಈ ಕುರಿತು ಪ್ರಶ್ನಿಸಿದೆ. ನಟನಿಗೆ ಯಾವ ಆಧಾರದ ಮೇಲೆ ಈ ಸೌಲಭ್ಯವನ್ನು ಕಲ್ಪಿಸಲಾಯಿತು?, ಈ ಕುರಿತ ಸಿಸಿಟಿವಿ ದೃಶ್ಯಗಳನ್ನು ಶನಿವಾರ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಪೊಲೀಸರಿಗೆ ಸೂಚಿಸಿದೆ.
ಅಷ್ಟೇ ಅಲ್ಲದೇ, ನಟನಿಗೆ ವಿಶೇಷ ಸೌಲಭ್ಯ ಸಿಗಲು ಕಾರಣವೇನು?, ಇದು ಬೇರೆ ಭಕ್ತರಿಗೆ ದರ್ಶನಕ್ಕೆ ಅಡ್ಡಿಯಾಗುವುದಿಲ್ಲವೇ?, ಭಕ್ತರ ಸಾಲಿನಲ್ಲಿ ಮಕ್ಕಳು ಮತ್ತು ವಯೋವೃದ್ದರಿರುತ್ತಾರೆ. ಅವರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಲು ಸಾಧ್ಯವೇ? ಅನೇಕರು ದರ್ಶನ ಪಡೆಯಲು ಸಾಧ್ಯವಾಗದೇ ಹಾಗೆಯೇ ತೆರಳಿದ್ದಾರೆ. ಅವರು ಯಾರ ಬಳಿ ಹೋಗಿ ದೂರು ಸಲ್ಲಿಸಬೇಕು?. ಅವರಿಗೆ ಅಷ್ಟು ಹೊತ್ತು ಗರ್ಭಗುಡಿ ಎದುರು ನಿಲ್ಲಲು ಅವಕಾಶ ಹೇಗೆ ನೀಡಲಾಯಿತು ಎಂದು ಕೋರ್ಟ್ ಪ್ರಶ್ನಿಸಿತು.
ನ್ಯಾಯಾಲಯದ ಆದೇಶದಂತೆ ಸಾಂವಿಧಾನಿಕ ಅಧಿಕಾರ ಹೊಂದಿರುವವರು ಮಾತ್ರ ಈ ರೀತಿಯ ವಿಶೇಷ ಸೌಲಭ್ಯ ಪಡೆಯಬಹುದು. ಆದರೆ, (ಡಿಸೆಂಬರ್ 5) ನಟನಿಗೆ ನೀಡಿದ ಅತಿಥ್ಯ ನಿಯಮದ ಸಂಪೂರ್ಣ ಉಲ್ಲಂಘನೆ ಎಂದು ಕೋರ್ಟ್ ಚಾಟಿ ಬೀಸಿದೆ.
ಇದನ್ನೂ ಓದಿ: ಕೇರಳ ಪೊಲೀಸರಿಂದ ಶಬರಿಮಲೆ ಸಂಪ್ರದಾಯಕ್ಕೆ ಧಕ್ಕೆ ಆರೋಪ: ವಿವಾದ ಸೃಷ್ಟಿಸಿದ ವೈರಲ್ ಫೋಟೋ