ತಿರುವನಂತಪುರಂ: ಕೇರಳದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಕಚೇರಿಗಳಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗಾಗಿ ವಿಶೇಷ ಸೂಚನೆಯನ್ನು ರಾಜ್ಯ ಕಂದಾಯ ಸಚಿವರಾದ ಕೆ ರಾಜನ್ ನೀಡಿದ್ದಾರೆ. ರಜೆ ಹಿನ್ನಲೆ ಗಿರಿ ಶಿಖಿರಕ್ಕೆ ಭೇಟಿ ನೀಡುವ ಜನರು ಹೆಚ್ಚಿನ ಜಾಗೃತಿವಹಿಸಬೇಕು. ಹೆಚ್ಚಿನ ಮಳೆಯಿಂದಾಗಿ ಭೂ ಕುಸಿತವಾಗುವ ಹಿನ್ನಲೆ ಪ್ರವಾಸಿಗರು ಎಚ್ಚರವಹಿಸುವುದು ಅಗತ್ಯ. ಗಿರಿ ಶಿಖರ ಪ್ರದೇಶದಲ್ಲಿ ಭೂ ಕುಸಿತ ಬೆದರಿಕೆ ಹಿನ್ನೆಲೆ ಕೆಲವು ಅಗತ್ಯ ನಿಯಂತ್ರಣ ಕ್ರಮಕ್ಕೆ ಸಿದ್ದವಾಗುವಂತೆ ಕೂಡ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ಪ್ರಾಧಿಕಾರ ಕೂಡ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ಮಣ್ಣಿನ ಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಕೆ ನೀಡಿದೆ. ಭೂಕುಸಿತದ ಅಪಾಯದ ಕುರಿತು ಪ್ರಯಾಣಿಕರಿಗೆ ಅಗತ್ಯ ಎಚ್ಚರಿಕೆ ನೀಡಲು ಇಂತಹ ಪ್ರದೇಶಗಳಲ್ಲಿ ಸುರಕ್ಷತಾ ಫಲಕಗಳನ್ನು ಅಳವಡಿಸಲಾಗುವುದು ಎಂದು ಸಚಿವ ರಾಜನ್ ತಿಳಿಸಿದ್ದಾರೆ.
ಎಲ್ಲ ತುರ್ತು ಪರಿಸ್ಥಿತಿಗಳ ನಿಭಾಯಿಸಲು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಕಚೇರಿಗಳಲ್ಲಿ ಎಲ್ಲಾ ಇಲಾಖೆಯೊಂದಿಗೆ 24/7 ತುರ್ತು ಕಾರ್ಯಾಚರಣೆ ಕೇಂದ್ರ ತೆರೆಯಲಾಗುವುದು. ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತ, ಮರ ಉರುಳಿದ ಮತ್ತು ಎಲೆಕ್ಟ್ರಿಕ್ ವೈರ್ಗಳು ಬಿದ್ದಿರುವ ಅನೇಕ ಪ್ರಕರಣಗಳು ಹಲವು ಪ್ರದೇಶದಲ್ಲಿ ಸೋಮವಾರ ವರದಿಯಾಗಿದೆ.
ಸಾಂಕ್ರಾಮಿಕತೆ ಹೆಚ್ಚುವ ಭೀತಿ: ನಿರಂತರ ಭಾರಿ ಮಳೆಯಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಈ ಸಂಬಂಧ ಎದುರಿಸುವಂತೆ ಎಲ್ಲ ಜಿಲ್ಲೆಗಳ ಆರೋಗ್ಯ ಇಲಾಖೆಗೆ ಮುನ್ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಹವಾಮಾನ ಬದಲಾವಣೆಯಿಂದ ಅನೇಕ ರೀತಿಯ ರೋಗಗಳು ಹರಡುವ ಸಾಧ್ಯತೆ ಇದ್ದು, ಇವುಗಳನ್ನು ಎದುರಿಸಲು ಆಸ್ಪತ್ರೆಗಳು ಸಿದ್ಧವಾಗಿರಬೇಕು. ಈ ಸಂಬಂಧ ಈಗಾಗಲೇ ಸೂಚನೆ ನೀಡಲಾಗಿದ್ದು, ಔಷಧಗಳ ದಾಸ್ತಾನಿಗೂ ತಿಳಿಸಲಾಗಿದೆ ಎಂದರು.
ಕೇರಳದ ಪತನಂತಿಟ್ಟು, ಕೊಟ್ಟಾಯಂ, ಇಡುಕ್ಕಿ, ಆಳಪುಳಂನಲ್ಲಿ ಮೇ 21ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ತಿರುವನಂತಪುರಂ ಮತ್ತು ಕೊಲ್ಲಂನಲ್ಲಿ ಮಂಗಳವಾರದವರೆಗೆ ಆರೇಂಜ್ ಆಲರ್ಟ್ ಘೋಷಣೆ ಮಾಡಲಾಗಿದೆ.
ಭಾರಿ ಮಳೆಯಿಂದ ಜೀವ ಅಪಾಯ ಎದುರಾಗುವ ಸಾಧ್ಯತೆ ಇರುವ ಹಿನ್ನಲೆ ಜನರು ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಲಹೆ ನೀಡಿದೆ.
ಇದನ್ನೂ ಓದಿ: ಆಹಾರ ಅರಸಿ ಬಂದು ಪ್ಲಾಸ್ಟಿಕ್ ರಾಶಿಯಲ್ಲಿ ಹೆಕ್ಕಿ-ಹೆಕ್ಕಿ ತ್ಯಾಜ್ಯ ತಿಂದ ಕಾಡಾನೆ: ವಿಡಿಯೋ