ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿಂದೂಗಳಲ್ಲಿ ಏಕತೆಗಾಗಿ 'ಕಟೆಂಗೆ ತೋ ಬಟೆಂಗೆ'(Division is destruction - ವಿಭಜನೆ ಎಂದರೆ ವಿನಾಶ) ಎಂದು ನೀಡಿರುವ ಘೋಷಣೆ ವಿಧಾನಸಭಾ ಚುನಾವಣೆಗೂ ಮುನ್ನವೇ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು ಸೃಷ್ಟಿಸಿದೆ.
ಎನ್‌ಸಿಪಿ ಮುಖ್ಯಸ್ಥ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಈ ಘೋಷಣೆಯನ್ನು ಸಾರ್ವಜನಿಕವಾಗಿಯೇ ಖಂಡಿಸಿದ್ದಾರೆ. ಮತ್ತೊಂದೆಡೆ, ಡಿಸಿಎಂ ದೇವೇಂದ್ರ ಫಡ್ನವಿಸ್ ಸಿಎಂ ಯೋಗಿ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸೆಕ್ಯುಲರಿಸ್ಟ್ ಎಂದು ಕರೆದುಕೊಳ್ಳುವವರಲ್ಲಿ ನಿಜವಾದ ಸೆಕ್ಯುಲರಿಸಂ ಇಲ್ಲ: "ಅಜಿತ್ ಪವಾರ್ ಅವರಿಗೆ ದೀರ್ಘಕಾಲದಿಂದ ಇರುವ ಹಿಂದೂ ವಿರೋಧಿ ಸಿದ್ಧಾಂತ ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ದಶಕಗಳ ಕಾಲ ಅಜಿತ್ ಪವಾರ್ ಜಾತ್ಯತೀತ ಮತ್ತು ಹಿಂದೂ ವಿರೋಧಿ ಸಿದ್ಧಾಂತದೊಂದಿಗೆ ಉಳಿದುಕೊಂಡಿದ್ದರು. ತಮ್ಮನ್ನು ಸೆಕ್ಯುಲರಿಸ್ಟ್ ಎಂದು ಕರೆದುಕೊಳ್ಳುವವರಲ್ಲಿ ನಿಜವಾದ ಸೆಕ್ಯುಲರಿಸಂ ಇಲ್ಲ. ಹಿಂದುತ್ವವನ್ನು ವಿರೋಧಿಸುವ ಜಾತ್ಯತೀತವಾದ ಜನರೊಂದಿಗೆ ಅವರು ಉಳಿದುಕೊಂಡಿದ್ದರು" ಎಂದು ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ಅಜಿತ್ ಪವಾರ್ಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
"ಸಾರ್ವಜನಿಕರ ಮನಸ್ಥಿತಿ ಅರ್ಥಮಾಡಿಕೊಳ್ಳಲು ಅಜಿತ್ ಪವಾರ್ಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಯೋಗಿ ಆದಿತ್ಯನಾಥ್ ನೀಡಿದ ಘೋಷಣೆಯಲ್ಲಿ ಯಾವುದೇ ತಪ್ಪಿಲ್ಲ. ಯೋಗಿಜಿ ಅವರ ಘೋಷಣೆಗಳಲ್ಲಿ ನನಗೆ ಏನು ತಪ್ಪು ಕಂಡುಬಂದಿಲ್ಲ. ಈ ದೇಶದ ಇತಿಹಾಸವನ್ನು ನೋಡಿ, ಜಬ್ ಜಬ್ ಬಾಟೆ ಹೈ ತಬ್ ಗುಲಾಮ್ ಬಾನೆ ಹೈ. ಈ ದೇಶವನ್ನು ಜಾತಿ, ರಾಜ್ಯಗಳಾಗಿ ಮತ್ತು ಸಮುದಾಯಗಳಾಗಿ ವಿಭಜಿಸಿದಾಗಲೆಲ್ಲಾ ನಾವು ಗುಲಾಮರಾಗಿದ್ದೇವೆ. ದೇಶವೂ ವಿಭಜನೆಯಾಯಿತು ಮತ್ತು ಅದರಂತೆ ಜನರು ಸಹ ವಿಭಜನೆಯಾದರು. ಅದಕ್ಕಾಗಿಯೇ ನಾವು ವಿಭಜನೆಯಾದರೆ, ನಮ್ಮನ್ನು ಕತ್ತರಿಸಲಾಗುತ್ತದೆ. ವಿಭಜನೆಯಾಗಬೇಡಿ ಎಂದು ಹೇಳಿರುವುದನ್ನು ಏಕೆ ಆಕ್ಷೇಪಿಸುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಘೋಷಣೆಯನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಏಕ್ ಹೈ ತೋ ಸೇಫ್ ಹೈ ಘೋಷಣೆ ನೀಡಿದ್ದ ಪ್ರಧಾನಿ: ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಏಕ್ ಹೈ ತೋ ಸೇಫ್ ಹೈ' ಎಂಬ ಘೋಷಣೆ ಮಾಡಿದ್ದರು. ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಬಿರ್ಸಾ ಮುಂಡಾ ಜನ್ಮದಿನ: ಬಿಹಾರದಲ್ಲಿಂದು ₹6,640 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಿರುವ ಮೋದಿ