ಕಾಸರಗೋಡು(ಕೇರಳ): ಬಡ ಕುಟುಂಬವೊಂದಕ್ಕೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ತನಗೆ ಬರುವ ಗೌರವಧನದಿಂದ ಸುಂದರವಾದ ಮನೆ ಮಾಡಿಕೊಟ್ಟಿದ್ದಾರೆ.
ಪೂರ್ಣ ವಿವರ: ಶರ್ಮಿಳಾ ಎಂಬವರ ಪತಿ ಬ್ರೈನ್ ಟ್ಯೂಮರ್‌ನಿಂದ ನಿಧನರಾಗಿದ್ದರು. ಈ ಅಗಲಿಕೆಯಿಂದ ತೀವ್ರವಾಗಿ ಮನನೊಂದ ಶರ್ಮಿಳಾ ತನ್ನಿಬ್ಬರು ಮಕ್ಕಳೊಂದಿಗೆ ಸಂಕಷ್ಟದ ಬದುಕು ಸಾಗಿಸುತ್ತಿದ್ದರು. ಕಷ್ಟಪಟ್ಟು ದುಡಿದು ಮಕ್ಕಳನ್ನು ಸಾಕುತ್ತಾ ತಮ್ಮದೇ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದರು. ಇಂಥ ಸಂದರ್ಭದಲ್ಲೇ ಕುಟುಂಬಕ್ಕೆ ಆಧಾರದಂತಿದ್ದ ಪತಿಯ ಸಹೋದರ ಕೂಡಾ ಅನಾರೋಗ್ಯದಿಂದ ಸಾವನ್ನಪ್ಪುತ್ತಾರೆ. ಇಷ್ಟು ಸಾಲದೆಂಬಂತೆ ಇದ್ದ ಮನೆಯೂ ಕುಸಿದು ಹೋಗುತ್ತದೆ.
ಇಂಥ ಘಟನೆಗಳಿಂದ ಎದೆಗುಂದದ ಶರ್ಮಿಳಾ, ತನಗೊಂದು ಮನೆ ನಿರ್ಮಿಸಲು ಆರ್ಥಿಕ ಸಹಾಯಕ್ಕಾಗಿ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟು ಮಾತ್ರವಲ್ಲ, ಶರ್ಮಿಳಾ ಅಂದುಕೊಂಡಂತೆ ಯಾವುದೂ ನಡೆಯುತ್ತಿರಲಿಲ್ಲ. ಕೊನೆಗೆ ಬಡ ಕುಟುಂಬದ ಕೂಗು ಗ್ರಾಮ ಪಂಚಾಯಿತಿ ಸದಸ್ಯ ಹಾಗು ದಾನಿ ಶಿವಪ್ರಸಾದ್ ಎಂಬವರಿಗೆ ಕೇಳುತ್ತದೆ. ಮಾಹಿತಿ ತಿಳಿದು ಸಹಾಯಹಸ್ತ ಚಾಚಿದ ಅವರು ತಮಗೆ ಪಂಚಾಯಿತಿ ನೀಡುವ ಮಾಸಿಕ ಗೌರವಧನವನ್ನು (8 ಸಾವಿರ ರೂ.) ಶರ್ಮಿಳಾ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆಂದು ನೀಡಲು ಮುಂದಾಗುತ್ತಾರೆ. ಅಷ್ಟೇ ಅಲ್ಲದೇ, ಕೇರಳದ 'ಕುಟುಂಬಶ್ರೀ' ಯೋಜನೆಯ ಕಾರ್ಯಕರ್ತರಿಂದಲೂ ಸಹಾಯ ಕೋರುತ್ತಾರೆ. ಈ ಮನವಿಗೆ ಸ್ಪಂದಿಸಿದ ತಮ್ಮ ವಾರ್ಡ್‌ನ ಕುಟುಂಬಶ್ರೀ ಕಾರ್ಯಕರ್ತರು 1 ಲಕ್ಷ ರೂಪಾಯಿ ನೀಡಿದರು. ಮನೆ ನಿರ್ಮಾಣ ಕಾರ್ಯಕ್ಕೆ ಸ್ಥಳೀಯರು ಕೂಡಾ ಕೈ ಜೋಡಿಸಿದರು. ಹೀಗೆ ಆರು ತಿಂಗಳಲ್ಲಿ ನೂತನ ಮನೆಗೆಲಸ ಮುಗಿದಿದೆ.
ಇದೀಗ 700 ಚದರಡಿ ಮನೆ ತಲೆ ಎತ್ತಿದ್ದು, ಇದರಲ್ಲಿ ಎರಡು ಮಲಗುವ ಕೋಣೆಗಳು, ಹಾಲ್ ಮತ್ತು ಅಡುಗೆ ಮನೆ ಇದೆ. ಇದುವರೆಗೆ ಸುಮಾರು 7.5 ಲಕ್ಷ ರೂ. ಖರ್ಚಾಗಿದೆ. ಹೊಸ ಮನೆಯನ್ನು ಶರ್ಮಿಳಾ ಅವರಿಗೆ ಶುಭ ಮುಹೂರ್ತದಲ್ಲಿ ಹಸ್ತಾಂತರಿಸಲು ಶಿವಪ್ರಸಾದ್ ಮತ್ತು ಕುಟುಂಬಶ್ರೀ ಕಾರ್ಯಕರ್ತರು ಸಿದ್ಧತೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಿಸಲು 2ನೇ ಬಾರಿಗೆ ವಿಧಾನಸಭೆ ನಿರ್ಣಯ - Keralam Resolution