ಮಂಡಿ (ಹಿಮಾಚಲ ಪ್ರದೇಶ): ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ತಮ್ಮ ಮೊದಲ ಚುನಾವಣಾ ಪರೀಕ್ಷೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿರುವ ಅವರು, ತಮ್ಮ ತಾಯಿಯ ಆಶೀರ್ವಾದ ಪಡೆದಿದ್ದು, ಅವರು ಈಶ್ವರನ ಸ್ವರೂಪ ಎಂದು ಬಣ್ಣಿಸಿದ್ದಾರೆ.
ಆರಂಭಿಕ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿವಿಕ್ರಮಾಧಿತ್ಯ ಸಿಂಗ್ ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ತಾಯಿಯೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ತಾಯಿಯಿಂದ ಸಿಹಿ ತಿನ್ನಿಸಿಕೊಳ್ಳುತ್ತಿದ್ದಾರೆ. ಎರಡನೇ ಫೋಟೋದಲ್ಲಿ ಅವರಿಂದ ಆಶೀರ್ವಾದ ಪಡೆಯುತ್ತಿದ್ದು, ತಾಯಿಯು ಈಶ್ವರನ ಸ್ವರೂಪ ಎಂದಿದ್ದಾರೆ.
ಈ ನಡುವೆ ಎಎನ್ಐಗೆ ಮಾತನಾಡಿರುವ ಅವರು, ಗೆಲುವಿನ ಆತ್ಮವಿಶ್ವಾಸ ಹೊಂದಿರುವುದಾಗಿ ತಿಳಿಸಿದ್ದಾರೆ. ಮಂಡಿ ಕ್ಷೇತ್ರದ ಜನರು ತಮ್ಮ ಮಗಳಿಗೆ ಅವಮಾನ ಮಾಡುವುದಿಲ್ಲ. ಹಿಮಾಚಲ ಪ್ರದೇಶ ನನ್ನ ಜನ್ಮಭೂಮಿಯಾಗಿದ್ದು, ಇಲ್ಲಿನ ಜನರ ಸೇವೆ ಮಾಡುವೆ. ನಾನು ಎಲ್ಲಿಗೆ ಹೋಗುವುದಿಲ್ಲ. ಬೇರೆಯವರು ಬೇಕಾದಲ್ಲಿ ತಮ್ಮ ಬ್ಯಾಗ್ ಹಿಡಿದು ಕ್ಷೇತ್ರ ತೊರೆಯಬಹುದು ಎಂದು ತಮ್ಮನ್ನು ಟೀಕಿಸಿದವರಿಗೆ ಉತ್ತರ ನೀಡಿದ್ದಾರೆ.
ಚುನಾವಣಾ ಆಯೋಗದ ಆರಂಭಿಕ ಟ್ರೆಂಡ್ ಅನುಸಾರ, ಕಂಗನಾ, ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾಧಿತ್ಯ ಅವರಿಗಿಂತ 5 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕಳೆದ ಶನಿವಾರ ಮೇ 25ರಂದು ಮತದಾನದ ಬಳಿಕ ಮಾತನಾಡಿದ್ದ ಅವರು, ಮಂಡಿ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ. ರಾಜ್ಯದ ನಾಲ್ಕು ಸ್ಥಾನಗಳಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಮಂಡಿ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್ ಪ್ರಾಬಲ್ಯವನ್ನು ಸಾಧಿಸಿತು. (ಐಎಎನ್ಎಸ್/ಎಎನ್ಐ)
ಇದನ್ನೂ ಓದಿ: ವಾರಾಣಸಿ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪ್ರಧಾನಿ ಮೋದಿಗೆ 72 ಸಾವಿರ ಮತಗಳ ಮುನ್ನಡೆ