ನವದೆಹಲಿ/ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷದ ಹಿರಿಯ ಮುಖಂಡ ಚಂಪೈ ಸೊರೇನ್ ಅವರು ಇಂದು ಜಾರ್ಖಂಡ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಜೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವಂತೆ 67 ವರ್ಷದ ನಾಯಕನಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ.
ಈ ಹಿಂದಿನ ಸಿಎಂ ಹೇಮಂತ್ ಸೊರೇನ್ ಅವರು ಭೂ ಹಗರಣದಲ್ಲಿ ಸಿಲುಕಿದ್ದು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇದಕ್ಕೂ ಮುನ್ನ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಚಂಪೈ ಸೊರೇನ್ ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಹೊಸ ಸಿಎಂ ಆಗಿ ತನ್ನನ್ನು ಪ್ರಮಾಣ ವಚನಕ್ಕೆ ಆಹ್ವಾನಿಸುವಂತೆ ಅವರು ಮನವಿ ಮಾಡಿದ್ದರು.
"ಕಳೆದ 18 ಗಂಟೆಗಳ ಅವಧಿಯಲ್ಲಿ ಜಾರ್ಖಂಡ್‌ನಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇಲ್ಲ. ರಾಜ್ಯದಲ್ಲಿ ಗೊಂದಲದ ವಾತಾವರಣವಿದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥನಾಗಿ ನೀವು ಆದಷ್ಟು ಬೇಗ ಸರ್ಕಾರ ರಚಿಸುತ್ತೀರಿ ಎಂದು ನಿರೀಕ್ಷಿಸುತ್ತೇನೆ" ಎಂದು ರಾಜ್ಯಪಾಲರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸರ್ಕಾರ ರಚನೆಗೆ ಅವಕಾಶ ನೀಡುವಲ್ಲಿ ರಾಜ್ಯಪಾಲರ ವಿಳಂಬ, ಸರ್ಕಾರ ರಚಿಸಲು ಬೇಕಾಗುವಷ್ಟು ಮಾತ್ರ ಶಾಸಕರ ಸಂಖ್ಯೆ ಇರುವುದರಿಂದ 'ಆಪರೇಷನ್ ಕಮಲ'ದ ಭಯದಿಂದ ಆಡಳಿತಾರೂಢ ಮೈತ್ರಿ ಪಕ್ಷಗಳು ತನ್ನ ಶಾಸಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಮುಂದಾಗಿದ್ದವು. ಆದರೆ ಇದಕ್ಕೆ ಪ್ರತಿಕೂಲ ಹವಾಮಾನ ಅಡ್ಡಿಯಾಯಿತು. ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವ ತೆಲಂಗಾಣಕ್ಕೆ ಶಾಸಕರನ್ನು ಹೊತ್ತ ವಿಮಾನ ತೆರಳಬೇಕಿತ್ತು. ಆದರೆ ವಿಮಾನ ಟೇಕ್‌ಆಫ್ ಆಗಲೇ ಇಲ್ಲ. ಹೀಗಾಗಿ ರಾಂಚಿಯಲ್ಲೇ ಇರುವ ಸರ್ಕಾರಿ ಅತಿಥಿಗೃಹಕ್ಕೆ ಶಾಸಕರನ್ನು ರವಾನಿಸಲಾಗಿತ್ತು. ಇದಾದ ಕೆಲವೇ ಗಂಟೆಗಳ ನಂಟರ ರಾಜ್ಯಪಾಲರಿಂದ ಚಂಪೈ ಸೊರೇನ್ ಅವರಿಗೆ ಕರೆ ಬಂದಿದೆ.
ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿ ಸರ್ಕಾರ ಜಾರ್ಖಂಡ್ ಅಸ್ತಿತ್ವದಲ್ಲಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಒಟ್ಟು 47 ಶಾಸಕರಿದ್ದಾರೆ. ಸರ್ಕಾರ ರಚನೆಗೆ 41 ಸದಸ್ಯ ಬೆಂಬಲ ಬೇಕಿದೆ. ಸದ್ಯ ಚಂಪೈ ಸೊರೇನ್ ಅವರಿಗೆ 43 ಸದಸ್ಯರ ಬೆಂಬಲವಿದೆ.
ಇದನ್ನೂ ಓದಿ: ಹೊಸ ಸರ್ಕಾರ ರಚನೆಗೆ ಆಹ್ವಾನ ನೀಡದ ಜಾರ್ಖಂಡ್ ರಾಜ್ಯಪಾಲರು: ಹೈದರಾಬಾದ್ಗೆ ಜೆಎಂಎಂ-ಕಾಂಗ್ರೆಸ್ ಶಾಸಕರು ಶಿಫ್ಟ್?