ಹೈದರಾಬಾದ್ (ತೆಲಂಗಾಣ): ತೆಲಂಗಾಣ ರಾಜ್ಯಪಾಲರಾಗಿ ಸಿ.ಪಿ.ರಾಧಾಕೃಷ್ಣನ್ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಸ್ತುತ ಜಾರ್ಖಂಡ್ ರಾಜ್ಯಪಾಲರಾಗಿರುವ ರಾಧಾಕೃಷ್ಣನ್ ತೆಲಂಗಾಣದ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೂತನ ರಾಜ್ಯಪಾಲರಿಗೆ ಪ್ರತಿಜ್ಞಾವಿಧಿ ಬೋಧಿಸಿದದರು.
ಎರಡು ದಿನಗಳ ಹಿಂದೆಯಷ್ಟೇ ತೆಲಂಗಾಣ ರಾಜ್ಯಪಾಲರಾಗಿದ್ದ ತಮಿಳಿಸೈ ಸೌಂದರರಾಜನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದ ತಮಿಳಿಸೈ ಆ ಹುದ್ದೆಗೂ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ನೂತನ ರಾಜ್ಯಪಾಲರನ್ನಾಗಿ ಸಿ.ಪಿ.ರಾಧಾಕೃಷ್ಣನ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಿಸಿದ್ದರು.
ಇಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಧಾಕೃಷ್ಣನ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಹಲವು ಸಚಿವರು ಪಾಲ್ಗೊಂಡು ಶುಭ ಹಾರೈಸಿದರು. 2023ರ ಫೆಬ್ರವರಿ 18ರಿಂದ ರಾಧಾಕೃಷ್ಣನ್ ಜಾರ್ಖಂಡ್‌ನ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅವರಿಗೆ ತೆಲಂಗಾಣ ಜೊತೆಗೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಲಾಗಿದೆ.
ತೆಲಂಗಾಣ ಕಂಡ ಮೂವರು ರಾಜ್ಯಪಾಲರ ಮೂಲವೂ ತಮಿಳುನಾಡು: ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿರುವ ಸಿ.ಪಿ.ರಾಧಾಕೃಷ್ಣನ್ ತಮಿಳುನಾಡಿನವರಾಗಿದ್ದಾರೆ. ಈ ಹಿಂದೆ ತೆಲಂಗಾಣ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ಇ.ಎಸ್.ಎಲ್.ನರಸಿಂಹನ್ ಮತ್ತು ತಮಿಳಿಸೈ ಸೌಂದರರಾಜನ್ ಸಹ ತಮಿಳುನಾಡಿನವರೇ ಆಗಿದ್ದರು. ಈಗ ಮೂರನೇ ರಾಜ್ಯಪಾಲರ ಮೂಲವೂ ತಮಿಳುನಾಡು ಎಂಬುದು ಗಮನಾರ್ಹ ವಿಷಯವಾಗಿದೆ.
ಸಿ.ಪಿ.ರಾಧಾಕೃಷ್ಣನ್ 1957ರ ಮೇ 4ರಂದು ಜನಿಸಿದ್ದು, ತಮಿಳುನಾಡು ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2016ರಿಂದ 2019ರವರೆಗೆ ಅವರು ಅಖಿಲ ಭಾರತ ನಾರು ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ನಂತರದಲ್ಲಿ ರಾಧಾಕೃಷ್ಣನ್ ಅವರನ್ನು ರಾಜ್ಯಪಾಲರ ಹುದ್ದೆಗೆ ನೇಮಿಸಲಾಗಿದೆ. ತಮಿಳಿಸೈ ಸೌಂದರರಾಜನ್ ರಾಜೀನಾಮೆಯಿಂದ ತೆರವಾದ ತೆಲಂಗಾಣ ರಾಜ್ಯಪಾಲರು, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಎರಡೂ ಹುದ್ದೆಗಳಿಗೆ ಪೂರ್ಣ ಪ್ರಮಾಣದ ರಾಜ್ಯಪಾಲರನ್ನು ನೇಮಿಸುವವರೆಗೆ ಸಿ.ಪಿ.ರಾಧಾಕೃಷ್ಣನ್ ಅವರು ಉಸ್ತುವಾರಿ ವಹಿಸಲಿದ್ದಾರೆ ಎಂದು ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ರಾಷ್ಟ್ರಪತಿಗಳ ಕಚೇರಿ ತಿಳಿಸಿದೆ.
ಬಿಜೆಪಿಗೆ ತಮಿಳಿಸೈ ಮರು ಸೇರ್ಪಡೆ: ಮತ್ತೊಂದೆಡೆ, ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿರುವ ತಮಿಳಿಸೈ ಸೌಂದರರಾಜನ್ ಇಂದು ತಮಿಳುನಾಡಿನಲ್ಲಿ ಬಿಜೆಪಿಗೆ ಮರುಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. 'ನಾನು ಯಾವಾಗಲೂ ಜನಪರ ನಾಯಕಿ. ಈ ಮೊದಲು ನಾನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷೆಯಾಗಿದ್ದೆ. ರಾಜ್ಯಪಾಲೆ ಆಗಿದ್ದಾಗಲೂ ನಾನು ಜನ ಗವರ್ನರ್ ಆಗಿದ್ದೆ. ಇದು ಜನರ ಮಧ್ಯೆ ಇರುವುದು ನನ್ನ ಆಸೆ. ನಾನು ಉದ್ದೇಶಕ್ಕಾಗಿ ನನ್ನ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೇನೆ ಎಂದು ತಮಿಳಿಸೈ ತಿಳಿಸಿದ್ದಾರೆ.
ಇದನ್ನೂ ಓದಿ: ತೆಲಂಗಾಣ ರಾಜ್ಯಪಾಲ ಹುದ್ದೆಗೆ ತಮಿಳಿಸೈ ರಾಜೀನಾಮೆ, ಲೋಕಸಭೆಗೆ ಸ್ಪರ್ಧೆ ಸಾಧ್ಯತೆ