ಲಲಿತ್‌ಪುರ(ಉತ್ತರ ಪ್ರದೇಶ): ಝಾನ್ಸಿ- ಲಲಿತ್‌ಪುರ ಲೋಕಸಭಾ ಕ್ಷೇತ್ರದಲ್ಲಿ ವೋಟ್ ಮಾಡಲು ಜನರು ಮತ್ತು ಸರ್ಕಾರಿ ಅಧಿಕಾರಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಹಾಗೂ ಜನರ ಬದ್ಧತೆಯಿಂದಾಗಿ ಇಲ್ಲಿನ ಸೋಲ್ಡಾ ಗ್ರಾಮದಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೇ ಶೇ.100 ರಷ್ಟು ಮತದಾನವಾಗಿದೆ. ಝಾನ್ಸಿ-ಲಲಿತ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅನುರಾಗ್ ಶರ್ಮಾ, ಕಾಂಗ್ರೆಸ್ನಿಂದ ಪ್ರದೀಪ್ ಜೈನ್, ರವಿ ಕುಶ್ವಾಹ ಬಿಎಸ್‌ಪಿಯಿಂದ ಕಣಕ್ಕಿಳಿದಿದ್ದಾರೆ. ಒಟ್ಟು 10 ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.
ಸೋಲ್ಡಾ ಗ್ರಾಮವು ಆದಿವಾಸಿಗಳ ಪ್ರಾಬಲ್ಯವನ್ನು ಹೊಂದಿದೆ. ಈ ಗ್ರಾಮ ಮೆಹ್ರೌನಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಸೋಲ್ಡಾ ಗ್ರಾಮದ ಬೂತ್ ಸಂಖ್ಯೆ 277 ರಲ್ಲಿ ಒಟ್ಟು 375 ಮತದಾರರಿದ್ದು, ಶೇಕಡಾ 100 ರಷ್ಟು ಮತ ಚಲಾಯಿಸಿದ್ದಾರೆ. ಅದರಲ್ಲಿ 198 ಪುರುಷ ಮತದಾರರು ಮತ್ತು 177 ಮಹಿಳಾ ಮತದಾರರು ಸೇರಿದ್ದಾರೆ. ಇಬ್ಬರು ಇಡಿಸಿ ಮತದಾರರು ಮತ ಚಲಾಯಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ಬಾಯಿ ಅವರು ಗ್ರಾಮಸ್ಥರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು. ಇದರಿಂದಾಗಿ ಜನರು ಮುಂದೆ ಬಂದು ವೋಟ್ ಮಾಡಿದ್ದಾರೆ.
ಸ್ವಂತ ಖರ್ಚಿನಿಂದ ಕಾರ್ಮಿಕರನ್ನು ಗ್ರಾಮಕ್ಕೆ ಕರೆಸಿದ ಅಧಿಕಾರಿ: ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ ಸೌರಭ್ ಬರ್ನ್‌ವಾಲ್ ಅವರ ಅವಿರತ ಶ್ರಮ ಮತ್ತು ಆರ್ಥಿಕ ನೆರವಿನಿಂದ ಬೆಂಗಳೂರಿನಿಂದ 20 ಮತ್ತು ಇಂದೋರ್‌ನಿಂದ 30 ಕಾರ್ಮಿಕರನ್ನು ವಿಮಾನ ಮತ್ತು ಬಸ್‌ನಲ್ಲಿ ಗ್ರಾಮಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಶೇ 100ರಷ್ಟು ಮತದಾನ ಸಾಧ್ಯವಾಯಿತು. ಇದಕ್ಕಾಗಿ ಸುಮಾರು 18 ಸಾವಿರ ರೂ ಖರ್ಚಾಗಿದೆ. ಇದೇ ವೇಳೆ ಶೇ.100ರಷ್ಟು ಮತದಾನವಾಗಿದಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಝಾನ್ಸಿ ವಿಮಲ್ ಕುಮಾರ್ ದುಬೆ ಅವರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಬ್ಲಾಕ್ ಅಭಿವೃದ್ಧಿ ಅಧಿಕಾರಿಯನ್ನು ಶ್ಲಾಘಿಸಿದ್ದಾರೆ.
ಮುಖ್ಯ ಅಭಿವೃದ್ಧಿ ಅಧಿಕಾರಿ ಕಮಲಾಕಾಂತ್ ಪಾಂಡೆ ಮಾತನಾಡಿ, ನಮ್ಮ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ಸೌರಭ್ ಬರ್ನ್‌ವಾಲ್ ಅವರು ಮತದಾನ ಮಾಡಿಸಲು ಬೆಂಗಳೂರಿನಿಂದ 20 ಕೂಲಿ ಕಾರ್ಮಿಕರನ್ನು ವೈಯಕ್ತಿಕ ವೆಚ್ಚದಲ್ಲಿ ಕರೆಸಿ ಮತ್ತು ಮತದಾನದ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ಮತದಾನ ಮಾಡಿದ ಎಲ್ಲ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಮತದಾನದ ಬಳಿಕ ಗ್ರಾಮಸ್ಥರು ಬುಂದೇಲಿ ಧಿರಿಸಿನಲ್ಲಿ ಸಂಪ್ರದಾಯಿಕ ನೃತ್ಯ ಮಾಡಿ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: 5ನೇ ಹಂತದ ಚುನಾವಣೆ: ಸಂಜೆ 5 ಗಂಟೆಯವರೆಗೆ 56.68 ಮತದಾನ.. ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ - Voting Turnout